ಜಬಲ್ಪುರ/ನವದೆಹಲಿ : ಬರೀ 19 ವರ್ಷದ ಯುವಕನೊಬ್ಬ ಯಾವುದೇ ಹಿರಿಯ ವಕೀಲರ ಬೆಂಬಲವಿಲ್ಲದೆಯೇ ಸುಪ್ರೀಂ ಕೋರ್ಟ್‌ನಲ್ಲಿ ನಿಂತು, ತನ್ನ ಹಕ್ಕಿಗಾಗಿ ಕೇವಲ 10 ನಿಮಿಷಗಳ ಕಾಲ ವಾದ ಮಂಡಿಸಿ ಐತಿಹಾಸಿಕ ಜಯ ಸಾಧಿಸಿದ್ದಾನೆ. ಮಧ್ಯಪ್ರದೇಶದ ಜಬಲ್ಪುರದ ಅಥರ್ವ ಚತುರ್ವೇದಿ ಎಂಬ ಈ ಪ್ರತಿಭಾವಂತ ವಿದ್ಯಾರ್ಥಿ, ತನಗೆ ನ್ಯಾಯವಾಗಿ ಸಿಗಬೇಕಿದ್ದ ಎಂಬಿಬಿಎಸ್ ಸೀಟಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಯಶಸ್ವಿಯಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
‘ನನಗೆ 10 ನಿಮಿಷ ಸಮಯ ನೀಡಿ’:
ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿದ್ದ ನ್ಯಾಯಪೀಠವು ಕಲಾಪ ಮುಗಿಸಿ ಏಳುವ ತಯಾರಿಯಲ್ಲಿತ್ತು. ಅಷ್ಟರಲ್ಲೇ ಅಥರ್ವ ಎದ್ದು ನಿಂತು, “ದಯವಿಟ್ಟು ನನಗೆ ಕೇವಲ 10 ನಿಮಿಷಗಳ ಕಾಲಾವಕಾಶ ನೀಡಿ” ಎಂದು ವಿನಂತಿಸಿದ. ಈ ಯುವ ಧ್ವನಿಗೆ ಓಗೊಟ್ಟ ನ್ಯಾಯಾಲಯವು ವಾದ ಆಲಿಸಲು ಒಪ್ಪಿತು. ಕೇವಲ ಹತ್ತು ನಿಮಿಷಗಳ ಕಾಲ ಅಥರ್ವ ಮಂಡಿಸಿದ ಪ್ರಬಲ ತರ್ಕ ಮತ್ತು ಸತ್ಯಾಂಶಗಳು ನ್ಯಾಯಮೂರ್ತಿಗಳ ಮನಗೆದ್ದಿತು. ಸಂವಿಧಾನದ 142ನೇ ವಿಧಿಯಡಿ ಇರುವ ವಿಶೇಷ ಅಧಿಕಾರವನ್ನು ಬಳಸಿದ ನ್ಯಾಯಾಲಯವು, ಅಥರ್ವನಿಗೆ ಎಂಬಿಬಿಎಸ್ ಪ್ರವೇಶ ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ಆದೇಶಿಸಿತು.
2 ಬಾರಿ ನೀಟ್ ಪಾಸ್ ಮಾಡಿದರೂ ಸಿಗದ ಸೀಟು
ಅಥರ್ವ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಒಂದು ಬಾರಿಯಲ್ಲ, ಸತತ ಎರಡು ಬಾರಿ ನೀಟ್ (NEET) ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರು. 530 ಅಂಕಗಳನ್ನು ಗಳಿಸಿದ್ದರೂ, ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಕೋಟಾದಡಿ ಖಾಸಗಿ ಕಾಲೇಜುಗಳಲ್ಲಿ ಮೀಸಲಾತಿ ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾದ ಕಾರಣ ಅವರಿಗೆ ಸೀಟು ನಿರಾಕರಿಸಲಾಗಿತ್ತು. ಈ ಅನ್ಯಾಯದ ವಿರುದ್ಧ ಸಿಡಿದೆದ್ದ ಅಥರ್ವ, ಜಬಲ್ಪುರ ಹೈಕೋರ್ಟ್‌ನಲ್ಲಿ ಮೊದಲು ಅರ್ಜಿ ಸಲ್ಲಿಸಿದ್ದ. ಅಲ್ಲಿನ ನ್ಯಾಯಾಧೀಶರು ಇವನ ವಾದದ ವೈಖರಿ ಕಂಡು, “ನೀನು ವೈದ್ಯನಾಗುವುದಕ್ಕಿಂತ ವಕೀಲನಾಗುವುದು ಉತ್ತಮ” ಎಂದು ಹಾಸ್ಯದ ಧಾಟಿಯಲ್ಲಿ ಪ್ರಶಂಸಿಸಿದ್ದರು.
ಲಾಕ್‌ಡೌನ್ ಅವಧಿಯಲ್ಲಿ ಕಲಿತ ಕಾನೂನು ಪಾಠ
ಅಥರ್ವನ ತಂದೆ ಮನೋಜ್ ಚತುರ್ವೇದಿ ಅವರು ವಕೀಲರಾಗಿದ್ದರೂ, ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿದ ಅನುಭವ ಅವರಿಗಿರಲಿಲ್ಲ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನ್ಯಾಯಾಲಯದ ಕಲಾಪಗಳು ಆನ್‌ಲೈನ್‌ನಲ್ಲಿ ನಡೆಯುತ್ತಿದ್ದಾಗ, ಅಥರ್ವ ಅವುಗಳನ್ನು ಗಮನಿಸುತ್ತಾ ಕಾನೂನಿನ ಸೂಕ್ಷ್ಮಗಳನ್ನು ಅರಿತಿದ್ದ. ದೆಹಲಿಗೆ ಹೋಗಿ ವಕೀಲರನ್ನು ನೇಮಿಸಿಕೊಳ್ಳುವ ಆರ್ಥಿಕ ಶಕ್ತಿ ಇಲ್ಲದ ಕಾರಣ, ತಾನೇ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಗಳನ್ನು ಡೌನ್‌ಲೋಡ್ ಮಾಡಿ, ಹಿಂದಿನ ತೀರ್ಪುಗಳನ್ನು ಅಭ್ಯಾಸ ಮಾಡಿ ‘ಸ್ಪೆಷಲ್ ಲೀವ್ ಪೆಟಿಷನ್’ (SLP) ಸಿದ್ಧಪಡಿಸಿದ್ದ.
ವೈದ್ಯನಾಗಬೇಕೆಂಬ ಹಂಬಲ ಹೊಂದಿರುವ ಅಥರ್ವ, ಸುಪ್ರೀಂ ಕೋರ್ಟ್‌ನಲ್ಲಿ ಜಯಗಳಿಸುವ ಮೂಲಕ ತನ್ನ ಕನಸಿಗೆ ಜೀವ ತುಂಬಿಕೊಂಡಿದ್ದಾನೆ. 7 ದಿನಗಳೊಳಗೆ ಇವರಿಗೆ ಕಾಲೇಜು ಹಂಚಿಕೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. “ಕಷ್ಟವೆಂಬ ಕಾರಣಕ್ಕಾಗಿಯೇ ನಾನು ವೈದ್ಯಕೀಯ ಕ್ಷೇತ್ರವನ್ನು ಆರಿಸಿಕೊಂಡೆ” ಎನ್ನುವ ಈ ಯುವಕ, ಕೇವಲ ರೋಗಗಳನ್ನು ಮಾತ್ರವಲ್ಲದೆ, ವ್ಯವಸ್ಥೆಯಲ್ಲಿದ್ದ ಅನ್ಯಾಯವನ್ನೂ ಗುಣಪಡಿಸುವ ಮೂಲಕ ಮಾದರಿಯಾಗಿದ್ದಾರೆ. ಇದು ಕೇವಲ ಒಬ್ಬ ವಿದ್ಯಾರ್ಥಿಯ ಗೆಲುವಲ್ಲ, ಬದಲಿಗೆ ಆರ್ಥಿಕ ಸಂಕಷ್ಟದ ನಡುವೆಯೂ ಆತ್ಮವಿಶ್ವಾಸದಿಂದ ಹೋರಾಡುವ ಪ್ರತಿಯೊಬ್ಬರಿಗೂ ಸಂದ ಜಯ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಅಪಾರ್ಟ್ಮೆಂಟ್‌ಗೆ ನುಗ್ಗಿ ಹಣ, ಚಿನ್ನ ದೋಚಿದ ಖರ್ತನಾಕ್ ಕಳ್ಳಿಯರು | ಲೇಡಿ ಗ್ಯಾಂಗ್‌ನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ



















