ಒಂದಲ್ಲಾ, ಎರಡಲ್ಲಾ 18 ವರ್ಷಗಳಿಂದ ಕಂಡಿದ್ದ ಕನಸೊಂದು ಅಲ್ಲಿ ನನಸಾಗಿತ್ತು ನಿಜ…ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಹೆಬ್ಬಯಕೆಯೊಂದು ಈಡೇರಿತ್ತು. ಪುಟಾಣಿಯಿಂದ ಹಿಡಿದು ವಯೋ ವೃದ್ಧರವರೆಗಿನ ಕ್ರೀಡಾ ಪ್ರೇಮ ಎಲ್ಲೆಡೆ ಪ್ರಜ್ವಲಿಸಿತ್ತು. ಆದರೆ, ಈ ಐತಿಹಾಸಿಕ 18ರ ಆರ್ ಸಿಬಿ ಗೆಲುವಿನ ಸಡಗರ ಕೇವಲ 18 ಗಂಟೆ ತುಂಬುವುದರೊಳಗಾಗಿ ಮಣ್ಣು ಪಾಲಾಗಿದೆ. ನಿಜಕ್ಕೂ ಕರ್ನಾಟಕ ಕಳೆದ ನಾಲ್ಕು ದಶಕದಲ್ಲಿ ಕಂಡುಕೇಳರಿಯತಂಥಾ ಭೀಕರ ದುರಂತವೊಂದು ನಡೆದು ಹೋಗಿದೆ. ಸಂಭ್ರಮದ ಮನೆಯಲ್ಲಿ ನೆಚ್ಚಿನ ಆಟಗಾರನ ನೋಡಲು ಬಂದ ಉಜ್ವಲ ಭವಿಷ್ಯ ಹೊತ್ತಿದ್ದ ಎಳೆಯ ಜೀವಗಳಿಂದು ಬಲಿಯಾಗಿವೆ.
ಬಾಳಿ ಬದುಕಬೇಕಿದ್ದವರ ಪಾಲಿಗೆ ಯಮನಾದ ವಿಜಯೋತ್ಸವ
ಮಹಾ ಕಾಲ್ತುಳಿತದಲ್ಲಿ ಬಲಿಯಾದ 11 ಮಂದಿ ಪೈಕಿ ಬಹುತೇಕರಿನ್ನೂ 20ರ ಆಸುಪಾಸಿನವರು. ಕಾಲೇಜುಗಳಲ್ಲಿ ಓದುತ್ತಿದ್ದ ಈ ಜೀವಗಳು ಇಂದು ಬಲಿಯಾಗಿರುವುದು ಅವರ ಕುಟುಂಬಗಳನ್ನು ಕಣ್ಣೀರಲ್ಲಿ ಮುಳುಗುವಂತೆ ಮಾಡಿವೆ. 20 ವರ್ಷದ ಭೂಮಿಕ್, ಸಹನಾ, ಚಿನ್ಮಯ್, ದಿವ್ಯಾಂಶಿ, ಶ್ರವಣ್, ಶಿವಲಿಂಗ ಎಲ್ಲರು ಇನ್ನೂ ಬಾಳಿ ಬದುಕಬೇಕಿದ್ದವರೇ. ಆದ್ರೆ ಆರ್ ಸಿಬಿ ಮೇಲಿನ ಅಭಿಮಾನ ನಿನ್ನೆ ಅವರೆನ್ನೆಲ್ಲಾ ಚಿನ್ನಸ್ವಾಮಿವರೆಗೂ ಎಳೆದು ತಂದಿತ್ತು. ಅಷ್ಟೇ ಅಲ್ಲಾ, ಕರಾಳ ವಿಧಿ ಅವರ ಉಸಿರನ್ನೇ ಕಸೆದಿದೆ.
ರಾಜ್ಯದ ಎರಡನೇ ಅತಿ ದೊಡ್ಡ ಕಾಲ್ತುಳಿತ
ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಕಾಲ್ತುಳಿತ ಇಂದು 11 ಮಂದಿಯನ್ನು ಬಲಿ ಪಡೆದಿದೆ. ಆದರೆ, 1981ರಲ್ಲಿ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಕರಾಳ ಘಟನೆಯೊಂದು ನಡೆದಿತ್ತು. ಬೆಂಗಳೂರಿನಲ್ಲಿ ಅಂದು ವೀನಸ್ ಸರ್ಕಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿ ಭೀಕರ ಕಾಲ್ತುಳಿತ ಘಟಿಸಿತ್ತು. ಈ ದುರ್ಘಟನೆಯಲ್ಲಿ 92 ಮಂದಿ ಪ್ರಾಣತೆತ್ತಿದ್ದರು. 1981ರ ಫೆಬ್ರವರಿ 7ರಂದು ಜಕ್ಕರಾಯನ ಕೆರೆಯಲ್ಲಿ ವೀನಸ್ ಸರ್ಕಸ್ ತನ್ನ ಟೆಂಟ್ ಹಾಕಿ ಪ್ರದರ್ಶನ ನೀಡುತ್ತಿತ್ತು. ಆದರೆ, ಅವತ್ತು ಸರ್ಕಸ್ ನಡೆದಿರುವಾಗಲೇ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿತ್ತು.
ಪರಿಣಾಮ ಬೆಂಕಿ ಹೊತ್ತಿ, ನೂರಾರು ಜನ ಏಕಾಏಕಿ ಹೊರ ಬರಲು ಓಡಲು ಶುರುಮಾಡಿದ್ದರು. ಈ ದುರ್ಘಟನೆಯಲ್ಲಿ ಅಂದು 56 ಮಕ್ಕಳು ಸೇರಿ 92 ಮಂದಿ ಪ್ರಾಣ ತೆತ್ತಿದ್ದರು. ಅದಾದ ಬಳಿಕ ನಿನ್ನೆ ಘಟಿಸಿದ ಚಿನ್ನಸ್ವಾಮಿ ಸ್ಟೇಡಿಯಂ ದುರಂತವೇ ಎರಡನೆಯದು. ಈ ಕರಾಳ ದುರ್ಘಟನೆಯಲ್ಲಿ 11 ಮಂದಿ ಬಲಿಯಾಗಿದ್ದಾರೆ.


















