ಬೆಂಗಳೂರು: ರಕ್ಷಣಾ ಸಚಿವಾಲಯದ ಅಂಗಸಂಸ್ಥೆಯಾಗಿರುವ ಆರ್ಡಿನನ್ಸ್ ಫ್ಯಾಕ್ಟರಿ ಖಮಾರಿಯಾದಲ್ಲಿ 179 ಹುದ್ದೆಗಳ (Job News) ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಟೆನ್ಯೂರ್ ಬೇಸ್ಡ್ ಆಗಿರುವ ಡೇಂಜರ್ ಬಿಲ್ಡಿಂಗ್ ವರ್ಕರ್ (ಡಿಬಿಡಬ್ಲ್ಯೂ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 22ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಏಪ್ರಿಲ್ 4ರೊಳಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು 179 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಮೊದಲಿಗೆ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಒಂದು ವರ್ಷದ ನಂತರ ಗರಿಷ್ಠ ನಾಲ್ಕು ವರ್ಷದ ಅವಧಿಗೆ ಗುತ್ತಿಗೆಯನ್ನು ವಿಸ್ತರಣೆ ಮಾಡಲಾಗುತ್ತದೆ. ಸೇವೆಯ ಅವಧಿಯಲ್ಲಿ 19,900 ರೂಪಾಯಿ ಮಾಸಿಕ ಸಂಬಳದ ಜತೆಗೆ ತುಟ್ಟಿಭತ್ಯೆಯನ್ನೂ (ಡಿಎ) ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೀಸಲಾತಿ ಹೀಗಿದೆ
ಒಟ್ಟು ಹುದ್ದೆಗಳ ಪೈಕಿ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 54, ಒಬಿಸಿ ವರ್ಗದವರಿಗೆ 13, ಎಸ್‌ಸಿ ಕೆಟಗರಿ ಅಭ್ಯರ್ಥಿಗಳಿಗೆ 45, ಎಸ್‌ಟಿ ಕೆಟಗರಿ ಅಭ್ಯರ್ಥಿಗಳಿಗೆ 67, ಮಾಜಿ ಸೈನಿಕರಿಗೆ 40 ಹುದ್ದೆಗಳು ಮೀಸಲಿವೆ. ಕಡ್ಡಾಯವಾಗಿ ಐಟಿಐ ಕೋರ್ಸ್ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು munitionsindia.in ವೆಬ್ ಪೋರ್ಟಲ್ ಗೆ ಭೇಟಿ ನೀಡಬಹುದಾಗಿದೆ.
ವಯಸ್ಸಿನ ಮಿತಿ ಎಷ್ಟು?
ಅರ್ಜಿ ಸಲ್ಲಿಸಲು 18 ವರ್ಷ ಕನಿಷ್ಠ ಆಗಿರಬೇಕು. ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು. ಎಸ್ ಸಿ ಹಾಗೂ ಎಸ್ ಟಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ವರ್ಗದವರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಅರ್ಜಿ ಸಲ್ಲಿಸಲು ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್, ಬರ್ತ್ ಸರ್ಟಿಫಿಕೇಟ್, ಐಟಿಐ ಕೋರ್ಸ್ ಮುಗಿಸಿದ ಪ್ರಮಾಣಪತ್ರ, ಲೇಟೆಸ್ಟ್ ಬಯೋಡೇಟಾ ಸೇರಿ ಹಲವು ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದಾಗಿದೆ.