ಇಸ್ಲಾಮಾಬಾದ್: ಪಾಕಿಸ್ತಾನದ ಯುವ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಸನಾ ಯೂಸುಫ್ (17) ಅವರನ್ನು ಅವರ ಇಸ್ಲಾಮಾಬಾದ್ ನಿವಾಸದಲ್ಲೇ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆಗೈದ ಆಘಾತಕಾರಿ ಘಟನೆ ನಡೆದಿದೆ. ಅಪ್ಪರ್ ಚಿತ್ರಾಲ್ನವರಾದ ಸನಾ ಅವರು ಖ್ಯಾತ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಸುಮಾರು 4 ಲಕ್ಷ ಚಂದಾದಾರರನ್ನು ಹೊಂದಿದ್ದರು. ಆಕೆಯ ಮನೆಗೆ ಆಗಮಿಸಿದ್ದ ಸಂಬಂಧಿಯೇ ಅತ್ಯಂತ ಸಮೀಪದಿಂದಲೇ ಅವರ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬೆನ್ನಲ್ಲೇ ದುಷ್ಕರ್ಮಿಯು ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆಯು ಗಣನೀಯವಾಗಿ ನಡೆಯುತ್ತಿದ್ದು, ಇದು ಕೂಡ ಅದೇ ರೀತಿಯ ಹತ್ಯೆಯೇ ಎಂಬ ಪ್ರಶ್ನೆ ಮೂಡಿದೆ. ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತ ವ್ಯಕ್ತಿಯು ಸನಾ ಮೇಲೆ ಗುಂಡು ಹಾರಿಸುವ ಮುನ್ನ ಮನೆಯ ಹೊರಗೆ ಆಕೆಯೊಂದಿಗೆ ಮಾತುಕತೆ ನಡೆಸುತ್ತಿದ್ದ ಎನ್ನಲಾಗಿದೆ. ನಂತರ ಆತ ಮನೆಯೊಳಗೆ ಪ್ರವೇಶಿಸಿದ್ದು, ಹಲವು ಸುತ್ತು ಗುಂಡುಗಳನ್ನು ಹಾರಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸನಾ ದೇಹಕ್ಕೆ ಎರಡು ಗುಂಡುಗಳು ಹೊಕ್ಕಿದ್ದು, ಆಕೆ ಸ್ಥಳದಲ್ಲೇ ಅಸುನೀಗಿದ್ದಾಳೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಈ ಘಟನೆಯು ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸನಾಗೆ ನ್ಯಾಯ ಒದಗಿಸಬೇಕೆಂದು ಹಲವರು ಆಗ್ರಹಿಸಿದ್ದಾರೆ. ಎಕ್ಸ್ ಹಾಗೂ ಇನ್ ಸ್ಟಾಗ್ರಾಂಗಳಲ್ಲಿ #JusticeForSanaYousuf ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.
ಸಾಮಾಜಿಕ ಹೋರಾಟಗಾರರೊಬ್ಬರ ಪುತ್ರಿಯಾಗಿರುವ ಸನಾ ಅವರು ಹೆಚ್ಚಾಗಿ ದೈನಂದಿನ ಜೀವನಶೈಲಿ, ಚಿತ್ರಾಲ್ ಸಂಸ್ಕೃತಿ, ಮಹಿಳೆಯರ ಹಕ್ಕುಗಳು ಮತ್ತು ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ವಿಡಿಯೋಗಳು ಹಾಗೂ ಯುವಜನತೆಗೆ ಸ್ಫೂರ್ತಿ ನೀಡುವ ವಿಡಿಯೋಗಳನ್ನು ಕೇಂದ್ರೀಕರಿಸಿ ಕಂಟೆಂಟ್ ಮಾಡುತ್ತಿದ್ದರು.
ಸನಾ ಅವರ ಹತ್ಯೆಯು 2012ರಲ್ಲಿ ಮಹಿಳೆಯರ ಶಿಕ್ಷಣ ಹಕ್ಕುಗಳಿಗಾಗಿ ಧ್ವನಿಯೆತ್ತಿದ್ದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾಯಿ ಹತ್ಯೆಯನ್ನೇ ನೆನಪಿಸಿದೆ.