ಮೈಸೂರು : ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 156ನೇ ಜನ್ಮದಿನದ ನಿಮಿತ್ತ ಸಿಎಂ ಸಿದ್ಧರಾಮಯ್ಯ ಅವರು ಮೈಸೂರಿನ ಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಗುರುವಾರ ಬೆಳಿಗ್ಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ.
ಆ ಬಳಿಕ ಮಾತನಾಡಿದ ಸಿಎಂ, ಮಹತ್ಮಾ ಗಾಂಧಿ ಜನ್ಮದಿನೋತ್ಸವವನ್ನು ಪ್ರತಿವರ್ಷ ದೇಶಾದ್ಯಂತ ಆಚರಣೆ ಮಾಡಿ ಸ್ಮರಿಸಲಾಗುತ್ತದೆ. ಗಾಂಧೀಜಿ ನೇತೃತ್ವದಲ್ಲಿ ನಮಗೆ ಸ್ವಾತಂತ್ರ್ಯ ಲಭಿಸಿದ್ದು, ಸ್ವಾತಂತ್ರ್ಯ ದೊರಕಲು ಅವರು ಪ್ರಮುಖ ಕಾರಣ ಕರ್ತರು. ಹಾಗಾಗಿ ನಾವು ಇಂದು ಸ್ವತಂತ್ರವಾಗಿದ್ದೇವೆ, ಗಾಂಧಿಯವರನ್ನು ಸ್ಮರಿಸಿ ಅವರು ನಡೆದ ದಾರಿಯಲ್ಲಿ ನಡೆಯುವ ಶಕ್ತಿ ನಮಗೆ ಲಭಿಸಲಿ ಎಂದು ಹೇಳಿದರು.
ಜೊತೆಗೆ ಇಂದು ದೇಶದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನ ಕೂಡ ಇದ್ದು, ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಅವರ ಆತ್ಮಕ್ಕೂ ಶಾಂತಿ ದೊರಕಲಿ, ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.