ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ರೂ. ಹಗರಣದ ತನಿಖೆ ಚುರುಕುಗೊಂಡಿದೆ. ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯನ್ನು ಚುರುಕುಗೊಳಿಸಿದೆ. ಪ್ರಧಾನ ಆರೋಪಿ ಸತ್ಯನಾರಾಯಣ ವರ್ಮಾ ಅಕ್ರಮದ ಹಣದಲ್ಲಿ ಖರೀದಿಸಿಟ್ಟಿದ್ದ 10 ಕೆಜಿ ಚಿನ್ನವನ್ನು ಅಧಿಕಾರಿಗಳು ಈಗಾಗಲೇ ಜಪ್ತಿ ಮಾಡಿದ್ದಾರೆ.
ನಿಗಮದ ಖಾತೆಯಿಂದ ವರ್ಗಾಯಿಸಿಕೊಂಡಿರುವ 94.70 ಕೋಟಿ ರೂ.ಗಳಲ್ಲಿ ಸತ್ಯನಾರಾಯಣ ವರ್ಮಾ ಹೆಚ್ಚು ಪಾಲು ಪಡೆದಿದ್ದ ಆರೋಪಿ. ಆ ಹಣದಿಂದ ಈತ ಸುಮಾರು 15 ಕೆಜಿ ಚಿನ್ನ ಖರೀದಿಸಿದ್ದ. ಆರೋಪಿಯು ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ಚಿನ್ನ ಎಲ್ಲಿಟ್ಟಿದ್ದಾನೆ ಎಂಬುವುದನ್ನು ಮಾತ್ರ ಬಾಯಿ ಬಿಟ್ಟಿರಲಿಲ್ಲ.
ಆನಂತರ ಅಧಿಕಾರಿಗಳು ಹೈದರಾಬಾದ್ ಗೆ ತೆರಳಿ ಸತ್ಯನಾರಾಯಣನ ಕುಟುಂಬಸ್ಥರು, ಆಪ್ತರು ಸೇರಿದಂತೆ ಹಲವು ಸಂಪರ್ಕಗಳನ್ನು ಕೆದಕಿ ನೋಡಿದಾಗ ಚಿನ್ನದ ರಹಸ್ಯ ಬಯಲಾಗಿತ್ತು. ಈ ವೇಳೆ 10 ಕೆಜಿ ಚಿನ್ನ ಜಪ್ತಿ ಮಾಡಲಾಗಿದೆ.
ಆರೋಪಿ ಸತ್ಯನಾರಾಯಣ ವರ್ಮಾ ನಿಗಮದಿಂದ ದೋಚಿದ್ದ ಹಣದಲ್ಲಿಯೇ ನಾಲ್ಕು ಐಷಾರಾಮಿ ಫ್ಲ್ಯಾಟ್‌ಗಳನ್ನು ಖರೀದಿಸಿರುವುದೂ ತನಿಖೆಯಲ್ಲಿ ತಿಳಿದು ಬಂದಿದೆ. ನಿಜಾಮಾಬಾದ್‌ನಲ್ಲಿ ಎರಡು ಹಾಗೂ ಹೈದರಾಬಾದ್ ಹೊರವಲಯದಲ್ಲಿ ಎರಡು ಫ್ಲ್ಯಾಟ್ ಖರೀದಿಸಿ ಬಿಲ್ಡರ್ ಗಳಿಗೆ ಮುಂಗಡ ಹಣ ನೀಡಿದ್ದಾನೆ ಎಂಬುವುದು ತಿಳಿದು ಬಂದಿದೆ.
ದ ಎರಡನೇ ಆರೋಪಿ ಸತ್ಯನಾರಾಯಣ ವರ್ಮಾ ಹಗರಣದಲ್ಲಿ ದೋಚಿದ್ದ ಹಣದಲ್ಲಿ ಕೋಟಿಗಟ್ಟಲೇ ಬೆಲೆ ಬಾಳುವ ಎರಡು ಐಷಾರಾಮಿ ಕಾರುಗಳನ್ನು ಖರೀದಿಸಿದ್ದ. ಹೈದರಾಬಾದ್ ಮೂಲದ ಸತ್ಯನಾರಾಯಣ ವರ್ಮಾ ಇಲ್ಲಿನ ಸೆಕೆಂಡ್ ಹ್ಯಾಂಡ್ ಕಾರು ಶೋರೂಂನಲ್ಲಿ 3.32 ಕೋಟಿ ರೂಪಾಯಿ ನೀಡಿ ಸೆಕೆಂಡ್ ಹ್ಯಾಂಡ್ ಮರ್ಸಿಡೀಸ್ ಬೆಂಜ್ ಮತ್ತು ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದ. ಆಗ ಶೋರೂಂ ಮಾಲೀಕರು ಕಾರುಗಳನ್ನು ಮರಳಿಸಿದರೆ ಹಣ ಹಿಂದಿರುಗಿಸುವುದಾಗಿ ಹೇಳಿದ್ದರು. ಅದರಂತೆ ಅವರಿಗೆ ಕಾರುಗಳನ್ನು ಹಿಂದಿರುಗಿಸಲಾಗಿದ್ದು, ಸತ್ಯನಾರಾಯಣ ವರ್ಮಾ ಪಾವತಿಸಿದ್ದ 3.32 ಕೋಟಿ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಇನ್ನೂ ಮುಂದುವರೆಸಿದ್ದಾರೆ. ಇನ್ನೂ ಯಾವಾ ಯಾವ ಸಂಗತಿಗಳು ಹೊರ ಬರುತ್ತವೆ ಎಂಬುವುದನ್ನು ಕಾಯ್ದು ನೋಡಬೇಕಿದೆ.