ಬೆಳಗಾವಿ : ರಾಜ್ಯ ಸರ್ಕಾರದ ಎಡವಟ್ಟು ಬಡ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವಂತಾಗಿದೆ. ಹಣ ಇಲ್ಲವೋ? ಅಥವಾ ನಿರ್ಲಕ್ಷವೋ? ಗೊತ್ತಿಲ್ಲ. ಜನರ ಬದುಕು ಮಾತ್ರ ಅಕ್ಷರಶಃ ನಲುಗುತ್ತಿದೆ.
ಇತ್ತೀಚೆಗಷ್ಟೇ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮುಗಿ ಬಿದ್ದಿದ್ದರು. ದರ ಏರಿಕೆಯ ಬಿಸಿ ಜನರನ್ನು ಪ್ರತಿ ದಿನ ಕಾಡುತ್ತಿದೆ. ಕೊಟ್ಟ ಗ್ಯಾರಂಟಿಗಳೂ ಜನರಿಗೆ ತಲುಪುತ್ತಿಲ್ಲ. ಸಾರಿಗೆ ಇಲಾಖೆ ಅಧೋಗತಿಗೆ ಹೋಗಿ ನಿಂತಿದೆ..ರಸ್ತೆಗಳು ಹಾಳಾಗಿ ಹೋಗುತ್ತಿವೆ. ಅಭಿವೃದ್ಧಿಗೆ ಹಣ ಸಾಕಾಗುತ್ತಿಲ್ಲ. ಈ ಮಧ್ಯೆ ಈಗ ಬಡ ರೋಗಿಗಳು ಸಂಕಷ್ಟ ಎದುರಿಸುವಂತಾಗುತ್ತಿದೆ.
ಸದ್ಯ ಡಯಾಗ್ನಾಸ್ಟಿಕ್ ಸಿಬ್ಬಂದಿ (Diagnostics Employees) ಸರ್ಕಾರದ ವಿರುದ್ಧ ವಾರ್ ಘೋಷಿಸಿದ್ದಾರೆ. ಆ ಸಿಬ್ಬಂದಿ ಪ್ರತಿಭಟನೆಯಿಂದ ರಾಜ್ಯದ ಸುಮಾರು 14 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳ 18 ಸೆಂಟರ್ ಗಳಲ್ಲಿ ಎಂಆರ್ಐ (MRI) ಮತ್ತು ಸಿಟಿ ಸ್ಕ್ಯಾನ್ (CT Scan) ಬಂದ್ ಆಗಿವೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನ್ ಸೇವೆ ಒದಗಿಸುವ ಕ್ರಸ್ನಾ ಡಯಾಗ್ನಾಸ್ಟಿಕ್ ಸಂಸ್ಥೆಗೆ ಸರ್ಕಾರ ಹಣ ಪಾವತಿ ಮಾಡಿಲ್ಲ. ಹಿಂದಿನ 3 ವರ್ಷಗಳಿಂದ ಬರೋಬ್ಬರಿ 140 ಕೋಟಿ ರೂ. ಹಣ ಪಾವತಿ ಮಾಡದೆ ಸರ್ಕಾರವು ಬಾಕಿ ಉಳಿಸಿಕೊಂಡಿದೆ. ಹೀಗಾಗಿ ವಿಜಯಪುರ, ಯಾದಗಿರಿ, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಎಂಆರ್ಐ, ಸಿಟಿ ಸ್ಕ್ಯಾನ್ ಸೇವೆ ಬಂದ್ ಆಗಿದೆ.
ಖಾಸಗಿ ಸ್ಕ್ಯಾನ್ ದರಕ್ಕೆ ಹೋಲಿಸಿದ್ರೆ ಅರ್ಧಕ್ಕರ್ಧ ಕಡಿಮೆ ಆಗುತ್ತಿತ್ತು. ಈಗ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಬಂದ್ ಆಗಿದ್ದು, ಖಾಸಗಿ ಸಿಟಿ ಸ್ಕ್ಯಾನ್ ಮೊರೆ ಹೋಗಬೇಕಾಗಿದ್ದರಿಂದಾಗಿ ಬಡವರು ಕಂಗಾಲಾಗಿದ್ದಾರೆ. ಈ ವಿಷಯವಾಗಿ ವಿಪಕ್ಷಗಳು ಕೂಡ ಸರ್ಕಾರದ ವಿರುದ್ಧ ಗುಡುಗುತ್ತಿವೆ. ಹಳೆ ಬಾಕಿ ಎಲ್ಲ ಸೇರಿ 140 ಕೋಟಿ ಕೊಡಿ ಅಂತಾ ಹೇಳುತ್ತಿವೆ. ಆದರೆ, ಸ್ಕ್ಯಾನ್ ಮಾಡಿದ್ದಕ್ಕೆ ದೃಢೀಕರಣ ಕೊಡಲು ಹೇಳಿದ್ದೇವೆ. ಎಲ್ಲಾ ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಹಣ ಬಿಡುಗಡೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸಮಸ್ಯೆ ಇತ್ಯರ್ಥವಾಗುವವರೆಗೂ ಬಡವರ ಬದುಕು ಮಾತ್ರ ಅಧೋಗತಿ ಎನ್ನುವಂತಾಗಿದೆ.
ಇದನ್ನೂ ಓದಿ : ಆಪರೇಷನ್ ವೇಳೆ ಹೊಟ್ಟೆಯಲ್ಲಿ ಕತ್ತರಿ | 5 ವರ್ಷಗಳ ನಂತರ ಘಟನೆ ಬೆಳಕಿಗೆ


















