ನಟ ದರ್ಶನ್ (Darshan) ಸೇರಿದಂತೆ ಒಟ್ಟು 13 ಜನ ಆರೋಪಿಗಳಿಗೆ 6 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿ ಆದೇಶ ಹೊರಡಿಸಲಾಗಿದೆ.
ದರ್ಶನ್ ಗೆಳತಿ ಪವಿತ್ರಾ ಗೌಡ (Pavithra Gowda)ರನ್ನೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿಯನ್ನು (Renuka Swamy) ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಯಿಸಿಕೊಂಡು ದರ್ಶನ್ ಗ್ಯಾಂಗ್ ಕೊಲೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ಕೊಲೆ ಮಾಡಿದ ನಂತರ ರಾಜಕಾಲುವೆ ಬಳಿ ರೇಣುಕಾ ಸ್ವಾಮಿ ಶವ ಎಸೆಯಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ದರ್ಶನ್ ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಿದ್ದಾರೆ. ಅರೆಸ್ಟ್ ಮಾಡಿದ ನಂತರ ಬೌರಿಂಗ್ ಆಸ್ಪತ್ರೆಯಲ್ಲಿ ದರ್ಶನ್, ಪವಿತ್ರಾ ಗೌಡ, ಕೆ. ಪವನ್ ಸೇರಿದಂತೆ ಎಲ್ಲ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಜಡ್ಜ್ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಆರ್ಥಿಕ ಅಪರಾಧಗಳ ಕೋರ್ಟ್ ನಲ್ಲಿ ವಿಚಾರಣೆ ವೇಳೆ ಪೊಲೀಸರು 14 ದಿನಗಳ ಕಾಲ ಕಸ್ಟಡಿಗೆ ಕೇಳಿದ್ದರು. ಆದರೆ, ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾರೆ. ನಟ ದರ್ಶನ್ ಎ2 ಆಗಿದ್ದಾರೆ. ಕೆ. ಪವನ್ ಎ3 ಆಗಿದ್ದಾನೆ. ಕೋರ್ಟ್ ನಲ್ಲಿ ವಾದ- ವಿವಾದ ಆಲಿಸಿದ ಜಡ್ಜ್ 6 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ವಿಚಾರಣೆ ವೇಳೆ ನ್ಯಾಯಾಲಯ (Court) ದರ್ಶನ್‍ಗೆ ಬಂಧನದ ಸಂದರ್ಭದಲ್ಲಿ ತೊಂದರೆ ಆಗಿದೆಯೆ ಎಂದು ಕೇಳಿದರು. ಇದಕ್ಕೆ ದರ್ಶನ್ ಇಲ್ಲ ಎದು ಪ್ರತಿಕ್ರಿಯಿಸಿದರು. ವಕೀಲರ ನೇಮಕ ಮಾಡಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ, ಹೌದು ಎಂದರು. ಬಳಿಕ ಮನೆಯವರಿಗೆ ಬಂಧನದ ಮಾಹಿತಿ ನೀಡಿದ್ದೇನೆ ಎಂದು ನ್ಯಾಯಾಲಯಕ್ಕೆ ದರ್ಶನ್ ತಿಳಿಸಿದರು.
ದರ್ಶನ್ ಪರ ವಕೀಲ ನಾರಾಯಣಸ್ವಾಮಿ, ದರ್ಶನ್ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ರೇಣುಕಾಸ್ವಾಮಿ ಶವ ಕೂಡ ಪತ್ತೆಯಾಗಿದೆ. ಇಷ್ಟೇ ಅಲ್ಲದೇ ದರ್ಶನ್ ವಿರುದ್ಧ ಯಾವುದೇ ಆರೋಪಗಳಿಲ್ಲ. ಅವರು ತಪ್ಪಿಸಿಕೊಂಡಿಲ್ಲ. ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಇದು ಅವರ ತೇಜೋವಧೆ ಮಾಡುವ ಯತ್ನ. ಹೀಗಾಗಿ ಪೊಲೀಸ್ ಕಸ್ಟಡಿಯ ಅಗತ್ಯವಿಲ್ಲ ಎಂದು ವಾದಿಸಿದರು.
ವಿಚಾರಣೆ ಬಳಿಕ 6ನೇ ಎಸಿಎಂಎಂ ನ್ಯಾಯಾಧೀಶ ವಿಶ್ವನಾಥ್ ಗೌಡರ್, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು. ದರ್ಶನ್ ಹಾಗೂ ಪವಿತ್ರಾ ಗೌಡ ನಾಯಾಧೀಶರ ಮುಂದೆ ಕಣ್ಣೀರು ಸುರಿಸಿದ್ದಾರೆ.
ಅಲ್ಲದೇ, ತನಿಖಾಧಿಕಾರಿ, ಎಲ್ಲೆಲ್ಲಿ ಹೊಡೆದಿದ್ದಾರೆ ಎಂಬ ತನಿಖೆ ನಡೆಸಬೇಕು. ವೆಪನ್ ಸೀಜ್ ಮಾಡಬೇಕು. ಹೀಗಾಗಿ ಪೊಲೀಸ್ ಕಸ್ಟಡಿ ಅಗತ್ಯವಿದೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವುದು ಅಗತ್ಯ ಎಂದು ವಾದಿಸಿದರು.