ದಾವಣಗೆರೆ: ಜಿಲ್ಲೆಯಲ್ಲಿ ಆತಂಕದ ಸುದ್ದಿಯೊಂದು ಹೊರ ಬಿದ್ದಿದ್ದು, ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 7 ತಿಂಗಳಲ್ಲಿ 125 ನವಜಾತ ಶಿಶುಗಳು (Newborn Baby) ಹಾಗೂ 28 ಜನ ಬಾಣಂತಿಯರು ಸಾವನ್ನಪ್ಪಿದ್ದಾರೆ. ಈ ಪ್ರಕರಣಗಳು ಸರ್ಕಾರಿ ಆಸ್ಪತ್ರೆಯಲ್ಲೇ ಹೆಚ್ಚಾಗಿ ನಡೆದಿರುವುದರಿಂದ ಆತಂಕ ವ್ಯಕ್ತವಾಗುತ್ತಿದೆ. ಈ ಘಟನೆಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ 2024ರ ಏಪ್ರಿಲ್ ನಿಂದ ನವೆಂಬರ್ ವರೆಗೆ 7 ತಿಂಗಳ ಅವಧಿಯಲ್ಲಿ 125 ನವಜಾತ ಶಿಶುಗಳು, 28 ಮಂದಿ ಬಾಣಂತಿಯರು ಸಾವನ್ನಪ್ಪಿದ್ದಾರೆ. ಈ ಪೈಕಿ ಚಿಗಟೇರಿ ಸರ್ಕಾರಿ ಆಸ್ಪತ್ರೆಯಲ್ಲಿ 111, ದಾವಣಗೆರೆ ನಗರದ ಚಾಮರಾಜ ಪೇಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 24 ಶಿಶುಗಳು ಸಾವನ್ನಪ್ಪಿವೆ.
ಸರ್ಕಾರಿ ಆಸ್ಪತ್ರೆಗಳಲ್ಲಿ 23 ಹಾಗೂ ಖಾಸಗಿ ಹೆರಿಗೆ ಆಸ್ಪತ್ರೆಗಳಲ್ಲಿ 5 ಜನ ಬಾಣಂತಿಯರು ಸಾವನ್ನಪ್ಪಿದ್ದಾರೆ. ಈ ಅಂಕಿ-ಸಂಖ್ಯೆ ನೋಡಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡರು. “ನಿಮಗೆ ಏನು ಸೌಲಭ್ಯ ಬೇಕು? ಎಷ್ಟು ಅನುದಾನಬೇಕು? ಏನಾದರು ಮಾಡಿ ಮಕ್ಕಳನ್ನು ಉಳಿಸಿ. ಪ್ರತಿಯೊಂದು ಜೀವ ಕೂಡ ನಮಗೆ ಮುಖ್ಯ ಎಂದು ಆಕ್ರೋಶ ವ್ಯಕ್ತಪಡಿಸಿ, ವೈದ್ಯಕೀಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರಿ ಆಸ್ಪತ್ರೆಗಳ ಅಂಕಿ ಅಂಶಗಳಾಗಿದ್ದು, ಖಾಸಗಿ ಆಸ್ಪತ್ರೆಗಳ ಅಂಕಿ ಅಂಶಗಳು ತೆಗೆದುಕೊಂಡರೆ ಈ ಮರಣ ಪ್ರಮಾಣ ಏರಿಕೆ ಆಗಿರಬಹುದು ಎನ್ನಲಾಗುತ್ತಿದೆ. ಇನ್ನಾದರೂ ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವಂತಾಗಲಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.