ಕೊಲಂಬೊ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ‘ದಿತ್ವಾ’ (Cyclone Ditwah) ಚಂಡಮಾರುತದ ಅಬ್ಬರಕ್ಕೆ ದ್ವೀಪರಾಷ್ಟ್ರ ಶ್ರೀಲಂಕಾ ತತ್ತರಿಸಿ ಹೋಗಿದೆ. ವಾರವಿಡೀ ಸುರಿದ ಧಾರಾಕಾರ ಮಳೆ ಮತ್ತು ಉಂಟಾದ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 123ಕ್ಕೆ ಏರಿಕೆಯಾಗಿದ್ದು, ಇನ್ನೂ 130ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಶ್ರೀಲಂಕಾ ವಿಪತ್ತು ನಿರ್ವಹಣಾ ಕೇಂದ್ರ ಶನಿವಾರ ದೃಢಪಡಿಸಿದೆ.
44,000 ಜನರ ಸ್ಥಳಾಂತರ
ಭಾರೀ ಮಳೆಯಿಂದಾಗಿ ಹಲವು ಮನೆಗಳು ಕುಸಿದು ಬಿದ್ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಮಾರು 43,995 ಜನರನ್ನು ಸರ್ಕಾರಿ ಸ್ವಾಮ್ಯದ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಡಿಎಂಸಿ ಮಹಾನಿರ್ದೇಶಕ ಸಂಪತ್ ಕೊಟುವೆಗೊಡ ತಿಳಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಸೇನಾಪಡೆಗಳನ್ನು ನಿಯೋಜಿಸಲಾಗಿದ್ದು, ಹೆಲಿಕಾಪ್ಟರ್‌ಗಳು ಮತ್ತು ದೋಣಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಭಾರತದಿಂದ ತುರ್ತು ನೆರವು
ಸಂಕಷ್ಟಕ್ಕೆ ಸಿಲುಕಿರುವ ನೆರೆಯ ರಾಷ್ಟ್ರಕ್ಕೆ ಭಾರತ ತಕ್ಷಣವೇ ಸ್ಪಂದಿಸಿದೆ. ಶನಿವಾರ ಬೆಳಿಗ್ಗೆ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿಶೇಷ ವಿಮಾನವೊಂದನ್ನು ಭಾರತವು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದೆ. ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಸಂಕಷ್ಟದ ಸಮಯದಲ್ಲಿ ಭಾರತ ನಿಮ್ಮೊಂದಿಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಿನ ನೆರವು ನೀಡಲು ನಾವು ಸಿದ್ಧರಿದ್ದೇವೆ,” ಎಂದು ಎಕ್ಸ್ (ಟ್ವಿಟರ್) ಮೂಲಕ ಅಭಯ ನೀಡಿದ್ದಾರೆ.
ಕೆಲಾನಿ ನದಿ ಅಪಾಯದ ಮಟ್ಟಕ್ಕೆ
ರಾಜಧಾನಿ ಕೊಲಂಬೊ ಮೂಲಕ ಹಿಂದೂ ಮಹಾಸಾಗರವನ್ನು ಸೇರುವ ಪ್ರಮುಖ ನದಿಯಾದ ‘ಕೆಲಾನಿ’ ನದಿ ಶುಕ್ರವಾರ ಸಂಜೆ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದೆ. ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದ್ದು, ನದಿ ದಡದಲ್ಲಿ ವಾಸಿಸುವ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆದೇಶಿಸಲಾಗಿದೆ.
ಭಾರತದತ್ತ ಚಂಡಮಾರುತದ ಪಯಣ
ಸದ್ಯ ಚಂಡಮಾರುತವು ಶ್ರೀಲಂಕಾ ಕರಾವಳಿಯಿಂದ ದೂರ ಸರಿದು ಭಾರತದತ್ತ ಮುಖ ಮಾಡಿದೆ. ದ್ವೀಪದ ಬಹುತೇಕ ಭಾಗಗಳಲ್ಲಿ ಮಳೆಯ ಅಬ್ಬರ ತಗ್ಗಿದೆಯಾದರೂ, ಚಂಡಮಾರುತದ ಪರಿಣಾಮದಿಂದಾಗಿ ಶ್ರೀಲಂಕಾದ ಉತ್ತರ ಭಾಗದಲ್ಲಿ ಇನ್ನೂ ಮಳೆ ಮುಂದುವರಿದಿದೆ.
2016ರಲ್ಲಿ ಸಂಭವಿಸಿದ ಪ್ರವಾಹದಲ್ಲಿ 71 ಜನರು ಸಾವನ್ನಪ್ಪಿದ್ದರು. ಆದರೆ ಈ ಬಾರಿಯ ಪ್ರವಾಹ ಅದಕ್ಕಿಂತಲೂ ಹೆಚ್ಚು ಹಾನಿ ಉಂಟುಮಾಡುವ ಭೀತಿ ಎದುರಾಗಿದೆ. 2003ರ ಜೂನ್‌ನಲ್ಲಿ ಸಂಭವಿಸಿದ ಪ್ರವಾಹದಲ್ಲಿ 254 ಜನರು ಸಾವನ್ನಪ್ಪಿದ್ದರು, ಅದು ಈ ಶತಮಾನದ ಅತ್ಯಂತ ಭೀಕರ ಪ್ರವಾಹವಾಗಿತ್ತು.
ಇದನ್ನೂ ಓದಿ: ರ‍್ಯಾಪಿಡೋ ಚಾಲಕನ ಖಾತೆಯಲ್ಲಿ 331 ಕೋಟಿ ರೂ.! | ಉದಯಪುರ ರಾಜವೈಭವದ ಮದುವೆಗೆ ‘ಕಪ್ಪು ಹಣ’ದ ನಂಟು



















