ಹುಬ್ಬಳ್ಳಿ: ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸುವುದಕ್ಕಾಗಿ ಬಂದಿದ್ದ ಲ್ಯಾಪ್ ಟಾಪ್ ಗಳು ಕಳ್ಳತನವಾಗಿರುವ ಘಟನೆ ನಡೆದಿದೆ.
ಕಾರ್ಮಿಕ ಇಲಾಖೆ ಕಚೇರಿಯಿಂದಲೇ ಲ್ಯಾಪ್ ಟಾಪ್ ಕಳ್ಳತನವಾಗಿವೆ. ಕರ್ನಾಟಕ ರಾಜ್ಯ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಫೆಡರೇಶನ್ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಸದ್ಯ ಘಟನೆಗೆ ಸಂಬಂಧಪಟ್ಟಂತೆ 26 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಕಳ್ಳತನವಾಗಿದ್ದ ಲ್ಯಾಪ್ ಟಾಪ್ ಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ‘ಕಾರ್ಮಿಕರ ಮಕ್ಕಳಿಗಾಗಿ ಇದ್ದ 101 ಲ್ಯಾಪ್ ಟಾಪ್ ಕಳ್ಳತನವಾಗಿದ್ದವು. ಈ ಕುರಿತು ಕಾರ್ಮಿಕ ಇಲಾಖೆ ಅಸಿಸ್ಟೆಂಟ್ ಕಮಿಷ್ನರ್ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶ ಹುಳ್ಳೂರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಸದ್ಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಲಾಗಿದೆ ಎಂದು ಹೇಳಿದ್ದಾರೆ.
ತನಿಖೆ ಕೈಗೊಂಡು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ ಅಲ್ಲೇ ಕೆಲಸ ಮಾಡುವ ದೀಪಕ್ ಮತ್ತು ಕೃಷ್ಣ ಎಂಬುವವರು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಇಬ್ಬರು ಎಸ್ಡಿಎ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ 4 ಸಿಬ್ಬಂದಿಗಳು ಕೃತ್ಯ ಮಾಡಿದ್ದರು.
ಆರೋಪಿಗಳು 6 ತಿಂಗಳ ಕಾಲ ಕಿಟಕಿಯಿಂದ ಇಳಿದು ಕದ್ದಿದ್ದಾರೆ. ಇಲಾಖೆಯಿಂದ ಮಾರಾಟ ಮಾಡೋಕೆ ಹೇಳಿದ್ದಾರೆ ಎಂದು ಮೊದಲಿಗೆ 4 ಲ್ಯಾಪ್ ಟಾಪ್ ಗಳನ್ನು ಮಾರಾಟ ಮಾಡಿದ್ದಾರೆ. ಇನ್ನುಳಿದ ಸುಮಾರು 16 ಜನ ಲ್ಯಾಪ್ ಟಾಪ್ ಕಳ್ಳತನಕ್ಕೆ ಪ್ರೇರಣೆ ನೀಡಿದ್ದಾರೆ. ಹೀಗಾಗಿ ಎಲ್ಲರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.