ವಾಷಿಂಗ್ಟನ್: ವಿದೇಶಿ ಕೌಶಲ್ಯಯುತ ವೃತ್ತಿಪರರಿಗೆ ನೀಡಲಾಗುವ ಎಚ್-1ಬಿ ವೀಸಾಗಳ ಮೇಲೆ $1 ಲಕ್ಷ (ಸುಮಾರು 85 ಲಕ್ಷ ರೂ.) ಶುಲ್ಕ ವಿಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ವಿವಾದಾತ್ಮಕ ನೀತಿಯು ತೀವ್ರ ವಿರೋಧಕ್ಕೆ ಗುರಿಯಾಗಿದೆ. ಅಮೆರಿಕದ 19 ರಾಜ್ಯಗಳು ಈ ನಿರ್ಧಾರವನ್ನು ‘ಕಾನೂನುಬಾಹಿರ’ ಮತ್ತು ದೇಶದ ಪ್ರಮುಖ ಕ್ಷೇತ್ರಗಳಿಗೆ ಮಾರಕ ಎಂದು ಆರೋಪಿಸಿ, ನ್ಯಾಯಾಲಯದಲ್ಲಿ ಪ್ರಶ್ನಿಸಿವೆ. ಈ ನಡೆ ಆರೋಗ್ಯ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ರಾಜ್ಯಗಳು ಆತಂಕ ವ್ಯಕ್ತಪಡಿಸಿವೆ.
ಕಾನೂನು ಹೋರಾಟದ ಮುಂಚೂಣಿಯಲ್ಲಿ ನ್ಯೂಯಾರ್ಕ್
ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರ ನೇತೃತ್ವದಲ್ಲಿ 19 ರಾಜ್ಯಗಳ ಒಕ್ಕೂಟವು ಶುಕ್ರವಾರ, ಡಿಸೆಂಬರ್ 13 ರಂದು ಮ್ಯಾಸಚೂಸೆಟ್ಸ್‌ನ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ದಾವೆ ಹೂಡಿದೆ. ಕಾಂಗ್ರೆಸ್‌ನ (ಸಂಸತ್ತು) ಅನುಮೋದನೆಯಿಲ್ಲದೆ ಅಥವಾ ಯಾವುದೇ ನಿಯಮ-ರಚನಾ ಪ್ರಕ್ರಿಯೆಯನ್ನು ಪಾಲಿಸದೆ ಏಕಾಏಕಿ ಶುಲ್ಕವನ್ನು ಹೇರಲಾಗಿದೆ. ಇದು ಆಡಳಿತಾತ್ಮಕ ಪ್ರಕ್ರಿಯೆ ಕಾಯಿದೆ (Administrative Procedure Act) ಮತ್ತು ವಲಸೆ ಮತ್ತು ರಾಷ್ಟ್ರೀಯತೆ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದಾವೆಯಲ್ಲಿ ವಾದಿಸಲಾಗಿದೆ. ನ್ಯೂಯಾರ್ಕ್ ಜೊತೆಗೆ ಕ್ಯಾಲಿಫೋರ್ನಿಯಾ, ಅರಿಜೋನಾ, ಇಲಿನಾಯ್ಸ್ ಮತ್ತು ಮಿಚಿಗನ್‌ನಂತಹ ಪ್ರಮುಖ ರಾಜ್ಯಗಳು ಈ ಹೋರಾಟದಲ್ಲಿ ಕೈಜೋಡಿಸಿವೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಚಕಾರ
ಈ ದುಬಾರಿ ಶುಲ್ಕವು ಸರ್ಕಾರಿ ಸಂಸ್ಥೆಗಳು, ಲಾಭರಹಿತ ಆಸ್ಪತ್ರೆಗಳು ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಎಚ್-1ಬಿ ವೀಸಾ ಕಾರ್ಯಕ್ರಮವನ್ನು ನಿಲುಕದಂತೆ ಮಾಡುತ್ತದೆ ಎಂದು ರಾಜ್ಯಗಳು ದೂರಿದೆ. “ಎಚ್-1ಬಿ ವೀಸಾಗಳು ನಮ್ಮ ಸಮುದಾಯಗಳಿಗೆ ಸೇವೆ ಸಲ್ಲಿಸಲು ಪ್ರತಿಭಾವಂತ ವೈದ್ಯರು, ದಾದಿಯರು ಮತ್ತು ಶಿಕ್ಷಕರಿಗೆ ಅವಕಾಶ ನೀಡುತ್ತವೆ. ಈ ಕಾರ್ಯಕ್ರಮವನ್ನು ಹಾಳುಮಾಡುವ ಕಾನೂನುಬಾಹಿರ ಪ್ರಯತ್ನವು ಜನರ ಆರೋಗ್ಯ ಸೇವೆ ಮತ್ತು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯುಂಟುಮಾಡುತ್ತದೆ,” ಎಂದು ಲೆಟಿಟಿಯಾ ಜೇಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿಶೇಷವಾಗಿ ಭಾರತೀಯ ವೃತ್ತಿಪರರು ಅತಿಹೆಚ್ಚು ಅವಲಂಬಿಸಿರುವ ಈ ವೀಸಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಅಮೆರಿಕದ ಆರ್ಥಿಕತೆಗೂ ಹಾನಿ ಮಾಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಗ್ರಾಮೀಣ ಭಾಗಕ್ಕೆ ತೀವ್ರ ಹೊಡೆತ
ಈ ಹೊಸ ಶುಲ್ಕವು ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿನ ಕಾರ್ಮಿಕರ ಕೊರತೆಯನ್ನು ಇನ್ನಷ್ಟು ಉಲ್ಬಣಗೊಳಿಸಲಿದೆ. ನ್ಯೂಯಾರ್ಕ್‌ನ 16 ಗ್ರಾಮೀಣ ಕೌಂಟಿಗಳಲ್ಲಿ ಪ್ರತಿ 10,000 ನಿವಾಸಿಗಳಿಗೆ ಕೇವಲ ನಾಲ್ವರು ವೈದ್ಯರಿದ್ದಾರೆ. ರಾಜ್ಯವು 2030ರ ವೇಳೆಗೆ 40,000 ದಾದಿಯರ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಎಚ್-1ಬಿ ವೃತ್ತಿಪರರನ್ನು ದೂರವಿಡುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ ಎಂದು ದಾವೆಯಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಅಂದಾಜಿನ ಪ್ರಕಾರ, 2036ರ ವೇಳೆಗೆ ದೇಶದಲ್ಲಿ 86,000 ವೈದ್ಯರ ಕೊರತೆ ಉಂಟಾಗಲಿದ್ದು, ಅದನ್ನು ತುಂಬಲು ವಿದೇಶಿ ಪ್ರತಿಭೆಗಳು ಅತ್ಯಗತ್ಯವಾಗಿವೆ.
ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ರಾಬ್ ಬೊಂಟಾ ಅವರು, “ಟ್ರಂಪ್ ಆಡಳಿತವು ತನಗೆ ಮನಬಂದಂತೆ ಶುಲ್ಕ ಹೆಚ್ಚಿಸಬಹುದು ಎಂದು ಭಾವಿಸಿದೆ, ಆದರೆ ಕಾನೂನು ಅದಕ್ಕೆ ಅವಕಾಶ ನೀಡುವುದಿಲ್ಲ. ಈ ಕಾನೂನುಬಾಹಿರ ಹೊರೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಭಾರತದ ಮೇಲಿನ ಸುಂಕಾಸ್ತ್ರ ಟ್ರಂಪ್‌ಗೆ ತಿರುಗಿ ಬಿತ್ತ | ಸುಂಕ ರದ್ದಿಗೆ ಅಮೆರಿಕ ಸಂಸತ್‌ನಲ್ಲಿ ನಿಲುವಳಿ



















