ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್(Saif Ali Khan) ಮನೆಗೇ ನುಗ್ಗಿ ಚೂರಿ ಇರಿದಿರುವ ಘಟನೆ ಇಡೀ ಮಹಾರಾಷ್ಟ್ರವನ್ನು ತಲ್ಲಣಗೊಳಿಸಿದೆ. ಹೈಪ್ರೊಫೈಲ್ ಸೆಲೆಬ್ರಿಟಿಗಳೇ ವಾಸವಿರುವ ಮುಂಬೈನ ಬಾಂದ್ರಾದಲ್ಲಿ ಈ ಘಟನೆ ನಡೆದಿದೆ. ಬಿಗಿಭದ್ರತೆಯಿರುವಂಥ ಸೈಫ್ ಮನೆಗೆ ನುಗ್ಗಿದ್ದಲ್ಲದೇ, 12ನೇ ಮಹಡಿಯಲ್ಲಿರುವ ಅವರ ಮನೆಯೊಳಗೆ ಪ್ರವೇಶಿಸಿ ದರೋಡೆಕೋರ(robber) ದುಷ್ಕೃತ್ಯ ಎಸಗಿರುವುದು ಎಲ್ಲರನ್ನೂ ಅಚ್ಚರಿಗೆ ನೂಕಿದೆ. ಅಂದ ಹಾಗೆ, ಸೈಫ್ ಅವರ ಈ ಮನೆ ಕುರಿತು ನಿಮಗೊಂದಿಗಷ್ಟು ಮಾಹಿತಿ ಇಲ್ಲಿದೆ.
ಸೈಫ್ ಅವರು 10 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಡೆವಲಪರ್ ಸತ್ಗುರು ಬಿಲ್ಡರ್ಸ್ ನಿಂದ ಈ ಮನೆಯನ್ನು ಖರೀದಿಸಿದ್ದರು. ಈ ಕಟ್ಟಡದ ಹೆಸರು ಸತ್ಗುರು ಶರಣ್. ಈ ಅಪಾರ್ಟ್ಮೆಂಟ್ನಲ್ಲಿರುವ ಒಟ್ಟು 4 ಮಹಡಿಗಳನ್ನು ಸೈಫ್ ಅಲಿ ಕುಟುಂಬಕ್ಕೆ ಸೇರಿವೆ. ಇದು ಒಟ್ಟು 10 ಸಾವಿರ ಚದರ ಅಡಿ ವಿಸ್ತೀರ್ಣವಿದ್ದು, ಮನೆಯಲ್ಲಿ 5 ಬೆಡ್ ರೂಂಗಳಿವೆ. ಇದಿಷ್ಟೇ ಅಲ್ಲದೆ, 6 ಟೆರೇಸ್ ಬಾಲ್ಕನಿಗಳು, ಒಂದು ಸಂಗೀತ ಕೊಠಡಿ, ಒಂದು ಜಿಮ್ನಾಶಿಯಂ, ಈಜುಕೊಳ, ಗ್ರಂಥಾಲಯವೂ ಈ ಐಷಾರಾಮಿ ಮನೆಯಲ್ಲಿದೆ.

ಮಕ್ಕಳಿಬ್ಬರಿಗೂ ಪ್ರತ್ಯೇಕ ಕೊಠಡಿ
ಸೈಫ್-ಕರೀನಾ ದಂಪತಿಯ ಮಕ್ಕಳಾದ ತೈಮೂರು ಅಲಿ ಖಾನ್ ಮತ್ತು ಜೇಹ್ ಗೆ ಈ ಕಟ್ಟಡದಲ್ಲಿ ಪ್ರತ್ಯೇಕ ಕೊಠಡಿಗಳಿದ್ದು, ಮಕ್ಕಳನ್ನು ಆಕರ್ಷಿಸುವಂತೆ ಅದನ್ನು ನಿರ್ಮಿಸಲಾಗಿದೆ. ಮಕ್ಕಳಿಗಾಗಿ ಮನೆಯೊಳಗೇ ನರ್ಸರಿಯೂ ಇದೆ.

ಸೈಫ್-ಕರೀನಾ ದಂಪತಿಗೆ ಪ್ರಯಾಣವೆಂದರೆ ಅಚ್ಚುಮೆಚ್ಚು. ಹೀಗಾಗಿ ತಾವೆಲ್ಲಿಲ್ಲಿ ಜೊತೆಗೆ ಪ್ರಯಾಣಿಸಿದ್ದಾರೋ, ಅಲ್ಲಿನ ಫೋಟೋಗಳು, ಅಲ್ಲಿಂದ ತಂದಿರುವ ವಿಶಿಷ್ಟ ಹಾಗೂ ಪ್ರಾಚೀನ ಕಲಾಕೃತಿಗಳ ಮೂಲಕವೇ ತಮ್ಮ ಮನೆಯ ಗೋಡೆಗಳು, ಕೊಠಡಿಗಳನ್ನು ಶೃಂಗರಿಸಿದ್ದಾರೆ. ಇದನ್ನು ನೋಡಿದರೆ ಈ ತಾರಾ ದಂಪತಿಯ ಟ್ರಾವೆಲ್ ಡೈರಿಯೇ ಕಣ್ಣೆದುರು ಬರುತ್ತದೆ. ಈ ಹಿಂದೆ ಅವರಿದ್ದ ಫಾರ್ಚೂನ್ ಹೈಟ್ಸ್ ಅಪಾರ್ಟ್ ಮೆಂಟ್ ಮಾದರಿಯಲ್ಲೇ ಈ ಮನೆಯಲ್ಲೂ ಒಂದು ಗ್ರಂಥಾಲಯ, ಕಲಾಕೃತಿಗಳು, ಪ್ರಾಚೀನ ವಸ್ತುಗಳು, ವಿಭಿನ್ನ ಕ್ಯಾಂಡಲ್ ಗಳು, ವಿಶಿಷ್ಟವಾದ ಪೀಠೋಪಕರಣಗಳೂ ಇವೆ.