2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ವಪ್ನಿಲ್ ಕುಸಾಲೆ ಭಾರತಕ್ಕೆ ಮೂರನೇ ಕಂಚು ಗೆದ್ದು ಕೊಡುವ ಮೂಲಕ ಐತಿಸಾಹಿಕ ಸಾಧನೆ ಮಾಡಿದ್ದಾರೆ.
50 ಮೀಟರ್ ರೈಫಲ್ ಇವೆಂಟ್ ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡುವ ಮೂಲಕ ಸ್ವಪ್ನಿಲ್, ಭಾರತದ ಪದಕಗಳ ಸಂಖ್ಯೆಯನ್ನು ಮೂರಕ್ಕೇರಿಸಿದ್ದಾರೆ. ಈ ಗೆಲುವಿನಿಂದ ಇಡೀ ದೇಶದಲ್ಲಿ ಸಂತಸದ ಅಲೆ ಎದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಪ್ನಿಲ್ಗೆ ಕರೆ ಮಾಡಿ ಶುಭಾಷಯ ಹೇಳಿದ್ದಾರೆ. ಭಾರತಕ್ಕೆ ಮೂರನೇ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟ ಸ್ವಪ್ನಿಲ್ಗೆ ಬರೋಬ್ಬರಿ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಅಲ್ಲದೆ ಅವರು ಸೇವೆ ಸಲ್ಲಿಸುತ್ತಿರುವ ಸೆಂಟ್ರಲ್ ರೈಲ್ವೇಸ್ ಕೂಡ ಅವರಿಗೆ ಭರ್ಜರಿ ಗಿಫ್ಟ್ ನೀಡಿದೆ.
ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಸ್ವಪ್ನಿಲ್ ಫೈನಲ್ ಸುತ್ತಿನಲ್ಲಿ 451.4 ಪಾಯಿಂಟ್ಸ್ ಕಲೆ ಹಾಕಿ ಕಂಚಿನ ಪದಕ ಗೆದ್ದಿದ್ದಾರೆ. ಹೀಗಾಗಿ ದೇಶಕ್ಕೆ ಕೀರ್ತಿ ತಂದಿರುವ ಸ್ವಪ್ನಿಲ್ ಗೆ ಮುಂಬಡ್ತಿ ನೀಡುವುದಾಗಿ ಸೆಂಟ್ರಲ್ ರೈಲ್ವೇ ಜನರಲ್ ಮ್ಯಾನೇಜರ್ ರಾಮಕರನ್ ಯಾದವ್ ಹೇಳಿದ್ದಾರೆ.
ದೇಶಕ್ಕೆ ಹಾಗೂ ರೈಲ್ವೆಗೆ ಕೀರ್ತಿ ತಂದ ಕಾರಣ ಟೀಸಿ (TC) ಹುದ್ದೆಯಿಂದ ಬಡ್ತಿ ನೀಡಲಾಗಿದೆ. ಅದರಂತೆ ಇವರು ‘ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ’ ಅಂದರೆ ಒಎಸ್ ಡಿ ಆಗಿ ಬಡ್ತಿ ಪಡೆದಿದ್ದಾರೆ. ಅಲ್ಲದೇ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಕೂಡ ಸ್ವಪ್ನಿಲ್ ಕುಸಾಲೆ ಕುಟುಂಬಕ್ಕೆ ಕರೆ ಮಾಡಿ ಅಭಿನಂದಿಸಿದ್ದಾರೆ. ಭವಿಷ್ಯದಲ್ಲಿ ಕುಟುಂಬದವರ ಕನಸು ನನಸಾಗಿಸಲು ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. 1 ಕೋಟಿ ರೂಪಾಯಿ ಬಹುಮಾನವನ್ನೂ ಕೂಡ ಘೋಷಿಸಿದ್ದಾರೆ.