ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ಈಗ 58ರ ಸಂಭ್ರಮ. ಕಿತ್ತೂರು ಕೋಟೆಗೆ ಬರುವವರು ಈ ವಸ್ತು ಸಂಗ್ರಹಾಲಯವನ್ನು ಕಣ್ತುಂಬಿಕೊಳ್ಳುತ್ತಾರೆ. ಕಳೆದ ಎರಡು ವರ್ಷಗಳಲ್ಲಿ 1.72 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, ಪ್ರವಾಸಿಗರಿಂದ 17 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ
ಈ ಮೊದಲು ಸಂಗ್ರಹಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಯಾವುದೇ ಶುಲ್ಕ ಇರಲಿಲ್ಲ. ಕಳೆದ ಎರಡು ವರ್ಷಗಳಿಂದ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಮಕ್ಕಳಿಗೆ 5 ರೂ., ವಯಸ್ಕರಿಗೆ 10 ರೂ. ಇರುತ್ತದೆ. 2023 ಆಗಸ್ಟ್ 3ರಿಂದ 2025 ಆಗಸ್ಟ್ 31ರವರೆಗೆ ಒಟ್ಟು 1,72,223 ಪ್ರವಾಸಿಗರು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. ಪ್ರವೇಶ ಶುಲ್ಕದಿಂದ ಬರೊಬ್ಬರಿ 17,33,855 ರೂ.ಸಂಗ್ರಹವಾಗಿದೆ.
ಮಾಜಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ಅವರ ವಿಶೇಷ ಆಸಕ್ತಿಯಿಂದ ತಲೆ ಎತ್ತಿರುವ ಈ ವಸ್ತು ಸಂಗ್ರಹಾಲಯವು ನಾಲ್ಕು ಗ್ಯಾಲರಿಗಳನ್ನು ಹೊಂದಿದ್ದು, ಒಂದರಲ್ಲಿ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ವಸ್ತುಗಳಿದ್ದರೆ, ಮತ್ತೊಂದರಲ್ಲಿ ಚನ್ನಮ್ಮನ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇನ್ನೆರಡು ಗ್ಯಾಲರಿಗಳಲ್ಲಿ ಶಿಲ್ಪಗಳನ್ನು ಕಾಣಬಹುದಾಗಿದೆ. ಇನ್ನು ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಅರಮನೆಯ ಸಾಗವಾನಿ ಕಟ್ಟಿಗೆಯ ಬಾಗಿಲು-ಕಿಟಕಿ, ಆಗಿನ ಕಾಲದ ನೈಜ ಖಡ್ಗ, ಕತ್ತಿ – ಗುರಾಣಿಗಳು, ಚೀಲಕತ್ತು, ಸೈನಿಕರ ಉಡುಪುಗಳು, ಹಳೆ ಕಾಲದ ಕೀಲಿಗಳು, ಫಿರಂಗಿ – ಗುಂಡುಗಳು, ಮಡಿಕೆಗಳು, ಕಿತ್ತೂರು ರಾಜರ ವಂಶಾವಳಿ ನೋಡುಗರನ್ನು ಅಂದಿನ ಕಾಲಕ್ಕೆ ಕೊಂಡೊಯ್ಯುತ್ತವೆ.



















