ಮಂಗಳೂರು: ವೃದ್ಧ ವ್ಯಕ್ತಿಗೆ ಬರೋಬ್ಬರಿ 1.60 ಕೋಟಿ ರೂ. ವಂಚಿಸಿರುವ ಘಟನೆಯೊಂದು ನಡೆದಿದೆ.
ಕ್ರೈಂ ಬ್ರಾಂಚ್ ಮತ್ತು ಸಿಬಿಐ ಅಧಿಕಾರಿಗಳ (Mumbai crime branch and CBI officers) ಸೋಗಿನಲ್ಲಿ ಆನ್‌ಲೈನ್ ವಂಚಕರು (Online Fraud) 72 ವರ್ಷದ ನಿವೃತ್ತ ಇಂಜಿನಿಯರ್ ಒಬ್ಬರಿಗೆ ಬೆದರಿಕೆ ಹಾಕಿ ಈ ರೀತಿ ವಂಚಿಸಿದ್ದಾರೆ. ಮಂಗಳೂರಿನಲ್ಲಿ (Mangaluru) ಈ ಘಟನೆ ನಡೆದಿದೆ. ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್ ಗೆ ಕಳುಹಿಸಲಾದ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆ ಎಂದು ಹೆದರಿಸಿ ವಂಚಿಸಿದ್ದಾರೆ.
ಫೋನ್ ಮಾಡಿದ ಅಪರಿಚಿತ ವ್ಯಕ್ತಿ ರಾಜೇಶ್ ಕುಮಾರ್ ಮತ್ತು ಫೆಡೆಕ್ಸ್ ಕಂಪನಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಥೈಲ್ಯಾಂಡ್‌ಗೆ ಕಳುಹಿಸಿದ್ದ ಪಾರ್ಸೆಲಲನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆ. ಇದರಲ್ಲಿ ಅಫ್ಘಾನಿಸ್ತಾನ ಮತ್ತು ಕೀನ್ಯಾದ ಐದು ಪಾಸ್‌ಪೋರ್ಟ್‌ಗಳನ್ನು, ಮೂರು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದೆ. 140 ಗ್ರಾಂ ಎಂಡಿಎಂಎ ಔಷಧ, ನಾಲ್ಕು ಕಿಲೋ ಬಟ್ಟೆ ಮತ್ತು ಲ್ಯಾಪ್‌ಟಾಪ್ ಹೊಂದಿದೆ. ಈ ಕುರಿತು ಮುಂಬೈ ಅಪರಾಧ ವಿಭಾಗ ತನಿಖೆ ನಡೆಸುತ್ತಿದೆ ಎಂದು ಹೇಳಿ ವಂಚಿಸಿದ್ದಾನೆ.
ನಿವೃತ್ತ ಎಂಜಿನಿಯರ್ ಇದನ್ನು ನಂಬಿ ಭಯಭೀತರಾಗಿ ಮೋಸ ಹೋಗಿದ್ದಾರೆ. ಸ್ಕೈಪ್ ಅಪ್ಲಿಕೇಶನ್‌ನಲ್ಲಿ ಸಿಬಿಐ ಅಧಿಕಾರಿಗಳಂತೆ ಪೋಸ್ ನೀಡಿ ಹಲವಾರು ನೋಟಿಸ್‌ಗಳನ್ನು ಕಳುಹಿಸಿದ್ದಾರೆ. ಐಸಿಐಸಿಐ ಬ್ಯಾಂಕ್ ಖಾತೆಯಿಂದ ಮೇ 2 ರಂದು 1.1 ಕೋಟಿ ರೂ. ಮತ್ತು ಮೇ 6 ರಂದು 50 ಲಕ್ಷ ರೂ. ಗಳನ್ನು ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಮೋಸ ಹೋದ ವ್ಯಕ್ತಿ ದೂರು ಸಲ್ಲಿಸಿದ್ದಾರೆ.