ರಾಜ್ಯದಲ್ಲಿ ಅಂತರ್ಜಲ ಕಾಪಿಟ್ಟುಕೊಳ್ಳುವುದರಲ್ಲಿ ನಮ್ಮ ವಿಫಲತೆ ರಾರಾಜಿಸುತ್ತಿದೆ. ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ವರ್ಷದಿಂದ ವರ್ಷಕ್ಕೆ ಇದು ಇಳಿಕೆಯಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಡಿಸೆಂಬರ್ ನಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಅಂಕಿ-ಅಂಶದಂತೆ ಅಂತರ್ಜಲ ದುಸ್ಥಿತಿಗೆ ಬಂದು ನಿಂತಿದೆ. ಏಳು ನದಿಗಳಿರುವ ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಹಳೆ ಮೈಸೂರು ಭಾಗದಲ್ಲಿ ಅಂತರ್ಜಲ ತೀವ್ರವಾಗಿ ಕುಸಿಯುತ್ತಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ ಅಂತರ್ಜಲ ಲಭ್ಯತೆ ಶೂನ್ಯಕ್ಕೆ ಇಳಿಕೆಯಾಗುತ್ತಿದ್ದು, ಮರುಭೂಮಿ ರಾಜ್ಯ ರಾಜಸ್ಥಾನದ ಹಾದಿ ಹಿಡಿದಿವೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಅಂತರ್ಜಲ ಕೊಳ್ಳೆ ವ್ಯಾಪಕವಾಗಿ ಏರಿಕೆಯಾಗಿದೆ.
ಅಂತರ್ಜಲದಲ್ಲಿ ಶೇ. 50ರಷ್ಟು ಬಳಸುವ ನಾವು, ಬಳಕೆಯ ಶೇ. 90ರಷ್ಟನ್ನು ಕೃಷಿಗೆ ಬಳಸುತ್ತಿದ್ದೇವೆ. ಆದರೆ, ನೀರಿನ ಉತ್ಪಾದಕತೆ’, ಮರುಪೂರಣದ ಕುರಿತು ಚಿಂತಿಸುತ್ತಿಲ್ಲ. ಇದು ತೀವ್ರ ಕುಸಿತಕ್ಕೆ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಬಿದ್ದ ಭಾರೀ ಮಳೆ ಮತ್ತು ಮಹಾಪೂರದಿಂದ ನದಿ, ಕೆರೆ, ಕಟ್ಟೆ ತುಂಬಿದ್ದರೂ ಅಂತರ್ಜಲ ಭಾರಿ ಸುಧಾರಣೆಯಾಗಿಲ್ಲ. ಅತಿ ಬಳಕೆಯಿಂದ ರಾಜಧಾನಿ ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಸ್ಥಿರ ಜಲಮಟ್ಟ ವರ್ಷದಿಂದ ವರ್ಷಕ್ಕೆ ತಳಕ್ಕೆ ಕುಸಿಯುತ್ತಿದೆ. ಮರುಪೂರಣ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಸುತ್ತಿರುವುದು ಇದಕ್ಕೆ ಕಾರಣ.
ಕೋಲಾರ- ಶೇ. 172
ಬೆಂ.ಗ್ರಾಮಾಂತರ- ಶೇ. 154
ಚಿಕ್ಕಬಳ್ಳಾಪುರ- ಶೇ. 153
ಬೆಂ. ನಗರ – ಶೇ. 150
ಚಿತ್ರದುರ್ಗ – ಶೇ. 132
ಇನ್ನೂ ಕೆಲವು ಜಿಲ್ಲೆಗಳಲ್ಲಿ ಅಂತರ್ಜಲ ಬಳಕೆ ಶೇ. 100ನ್ನೂ ಮೀರಿರುವ ಹಿನ್ನೆಲೆಯಲ್ಲಿ ಹಾಗೂ ಮರುಪೂರಣ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಮರಭೂಮಿಯ ಭಾವ ಆವರಿಸುತ್ತಿದೆ. ಅಲ್ಲದೇ, ರಾಜ್ಯದಲ್ಲಿ 39,352 ಚದರ ಕಿ.ಮೀ. ಪ್ರದೇಶದಲ್ಲಿ ಅಂತರ್ಜಲದ ಹೆಚ್ಚಿನ ಬಳಕೆ ಮಾಡಿದ್ದು, 6,580 ಚ.ಕಿಮೀ ಪ್ರದೇಶದಲ್ಲಿ ಗಂಭೀರ ಸಮಸ್ಯೆಗೆ ಕಾರಣವಾಗುತ್ತಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ನಿತ್ಯ ಹರಿದ್ವರ್ಣವಣದ ಕರುನಾಡು ರಾಜಸ್ಥಾನದಂತೆ ಬರುಡಾಗುವುದರಲ್ಲಿ ಸಂಶಯವೇ ಇಲ್ಲ.