ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳನ್ನು 10 ದಿನಗಳ ಕಾಲ ಎನ್ ಐಎ ವಶಕ್ಕೆ ಕೋರ್ಟ್ ನೀಡಿದೆ.
ಈಗಾಗಲೇ ಬಂಧನಕ್ಕೆ ಒಳಗಾಗಿರುವ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ನ್ಯಾಯಾಧೀಶರು ಎನ್ ಐಎ ವಶಕ್ಕೆ ನೀಡಿ ಆದೇಶಿಸಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಮಾಡಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದ ಉಗ್ರರನ್ನು ಎನ್ ಐಎ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಅಲ್ಲದೇ, ಇಬ್ಬರು ಶಂಕಿತ ಉಗ್ರರನ್ನು ಅಧಿಕಾರಿಗಳು ಇಂಟ್ರಾಗೇಷನ್ ಸೆಲ್ ನಲ್ಲಿ ವಿಚಾರಣೆ ನಡೆಸಿದ್ದಾರೆ. ನಂತರ ಕೋರಮಂಗಲದ ನಿವಾಸದಲ್ಲಿ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು 10 ದಿನಗಳ ಕಾಲ ಎನ್ ಐಎ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.
ಶಂಕಿತ ಉಗ್ರ ಅಬ್ದುಲ್ ಮತೀನ್ ತಾಹ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದಿದ್ದು, ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾನೆ. ಈತ ಡಾರ್ಕ್ ವೆಬ್ ಮೂಲಕ ಬಾಂಬ್ ತಯಾರಿಸುವುದನ್ನು ಕಲಿತಿದ್ದ. ಮಂಗಳೂರು ಕುಕ್ಕರ್ ಬಾಂಬ್, ರಾಮೇಶ್ವರಂ ಕೆಫೆ ಸ್ಫೋಟಗೊಳಿಸಲು ಈತನೆ ಬಾಂಬ್ ತಯಾರಿಸುವ ಪ್ಲಾನ್ ಮಾಡಿದ್ದ ಎನ್ನಲಾಗಿದೆ. ತುಂಗಾ ತೀರದ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್, ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಮಾಡಿರುವುದು ಈತನ ನಿರ್ದೇಶನದಲ್ಲಿ.