ಹಾವೇರಿ: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ಜನರು ಅಧಿಕಾರಕ್ಕೆ ತಂದಿದ್ದಾರೆ. ಈಗ ಅಧಿಕಾರಕ್ಕೆ ತಂದವರೇ ಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಧಾವಿಸುವ ಕೆಲಸ ಅವರದ್ದು. ಪ್ರವಾಹ ಬಂದಾಗ ನಾವು ಯಾರನ್ನೂ ಕಾಯದೆ ಎರಡು ಬಾರಿ ಪರಿಹಾರ ನೀಡಿದ್ದೇವೆ. ಈಗ ಸರ್ಕಾರ ಪರಿಹಾರ ನೀಡಿ ಗಂಡಸ್ತನ ತೋರಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಹಾನಗಲ್ ನ ಆಡೂರು ಗ್ರಾಮದಲ್ಲಿ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, 17 ಲಕ್ಷ ಜನರಿಗೆ ಪರಿಹಾರ ನೀಡಿದ್ದೇವೆ. ಪರಿಹಾರ ನೀಡುವಾಗ ನಾವು ಯಾರ ಕಡೆಗೂ ಬೊಟ್ಟು ಮಾಡಿ ತೋರಿಸಿಲ್ಲ. ಅದು ನಿಜವಾದ ಗಂಡಸ್ತನ. ಮೊದಲು ರೈತರಿಗೆ ಪರಿಹಾರ ಕೊಡಲಿ, ಆ ಮೇಲೆ ಕೇಂದ್ರದಿಂದ ಪರಿಹಾರದ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ನಾವು ರಾಮನ ಹೆಸರು ಹೇಳುತ್ತೇವೆ. ರಾಮರಾಜ್ಯವನ್ನ ಮಾಡುತ್ತೇವೆ. ಕರ್ನಾಟಕಕ್ಕೆ ಬರುತ್ತಿರುವುದು ನರೇಂದ್ರ ಮೋದಿ ಕೊಟ್ಟಿರುವ ಅಕ್ಕಿ. ಸಿದ್ದರಾಮಯ್ಯ ಒಂದು ಕಾಳು ಅಕ್ಕಿಯನ್ನೂ ಕೊಟ್ಟಿಲ್ಲ. ಅವರಿಗೆ ಅನ್ನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಗುಡುಗಿದ್ದಾರೆ.