ರಾಂಚಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭರ್ಜರಿ ಬೇಟೆಯಾಡಿರುವ ಇಡಿ ಅಧಿಕಾರಿಗಳು ಸಚಿವರ ಆಪ್ತರೊಬ್ಬರ ಮನೆಯಲ್ಲಿ ಬರೋಬ್ಬರಿ 30 ಕೋಟಿ ರೂ.ಗೂ ಅಧಿಕ ಹಣ ಪತ್ತೆ ಮಾಡಿದ್ದಾರೆ.
ಮನಿ ಲಾಂಡ್ರಿಂಗ್ ನಿಗ್ರಹ ಕಾಯ್ದೆಯಡಿ ರಾಂಚಿಯ ಹಲವೆಡೆ ಇಡಿ ದಾಳಿ ನಡೆಸಿತ್ತು. ಗ್ರಾಮೀಣಾಭಿವೃದ್ಧಿ ಮಂತ್ರಿ ಆಗಿರುವ ಕಾಂಗ್ರೆಸ್ ನಾಯಕ ಆಲಂಗೀರ್ ಆಲಂ (Alamgir Alam) ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಸಹಾಯಕನ ಮನೆಯ ಮೇಲೆಯೇ ದಾಳಿ ನಡೆಸಿದಾಗ ಈ ಘಟನೆ ಬಯಲಿಗೆ ಬಂದಿದೆ. ಕೊಠಡಿಯಲ್ಲಿ ರಾಶಿ ರಾಶಿಯಾಗಿ ಇಟ್ಟಿದ್ದ ಹಣದ ಕಟ್ಟುಗಳನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ. ಬರೋಬ್ಬರಿ 12 ಗಂಟೆಗಳ ಕಾಲ ಈ ದುಡ್ಡನ್ನು ಎಣಿಸಲಾಗಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಲೇವಡಿ ಮಾಡಿದ್ದು, ಜಾರ್ಖಂಡ್‍ನಲ್ಲಿ ದುಡ್ಡಿನ ಪರ್ವತವೇ ಪತ್ತೆಯಾಗಿದೆ. ಇದು ಜನರಿಂದ ಲೂಟಿ ಹೊಡೆದ ಹಣ. ಭ್ರಷ್ಟಾಚಾರದ ವಿರುದ್ಧ ಮೋದಿ ಕ್ರಮ ತಗೋತಾರೆ ಅನ್ನೊದಕ್ಕೇ ಇದೆ ಸಾಕ್ಷಿ ಎಂದು ಆರೋಪಿಸಿದ್ದಾರೆ.
ಆದರೆ, ಇದನ್ನು ಆಲಂಗೀರ್ ನಿರಾಕರಿಸಿದ್ದು, ಆತ ಸರ್ಕಾರ ಒದಗಿಸಿದ್ದ ಆಪ್ತ ಕಾರ್ಯದರ್ಶಿ. ಹೀಗಾಗಿ ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.