ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ಮುಕ್ತಾಯವಾಗಿದೆ. ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡ ಮತದಾನ ಪಕ್ರಿಯೆ ಸಂಜೆ 6 ಗಂಟೆಯವರೆಗೆ ನಡೆಯಿತು.
ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ಧ್ವಂಸ ಮಾಡಿರುವ ವಿಷಯ ಬಿಟ್ಟರೆ, ಎಲ್ಲೆಡೆ ಶಾಂತ ರೀತಿಯಲ್ಲಿ ಮತದಾನ ನಡೆದಿದೆ. ಮೊದಲ ಮತದಾನದಲ್ಲಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚಿನ ಮತದಾನವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಬೆಂಗಳೂರಿನಲ್ಲಿ ಮತದಾನವಾಗಿಲ್ಲ. ಪ್ರಜ್ಞಾವಂತರು ಈ ಬಾರಿಯೂ ಮತದಾನದಿಂದ ದೂರ ಉಳಿದಿದ್ದಾರೆ.
ರಾಜ್ಯದಲ್ಲಿ ಮೊದಲ ಹಂತದಲ್ಲಿ ಒಟ್ಟಾರೆ ಶೇ. 65ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್‌ನಲ್ಲಿ ಅತೀ ಕಡಿಮೆ ಶೇ. 49ರಷ್ಟು ಮತದಾನವಾಗಿದೆ. ಬೆಂಗಳೂರು ಉತ್ತರದಲ್ಲಿ ಶೇ. 51, ಬೆಂಗಳೂರು ಗ್ರಾಮಾಂತರದಲ್ಲಿ ಶೇ. 61ರಷ್ಟು ಮತದಾನವಾಗಿದೆ. ಬೆಂಗಳೂರು ದಕ್ಷಿಣದಲ್ಲಿ ಶೇ. 49, ಚಾಮರಾಜನಗರದಲ್ಲಿ ಶೇ. 69, ಚಿಕ್ಕಬಳ್ಳಾಪುರದಲ್ಲಿ ಶೇ. 71, ಚಿತ್ರದುರ್ಗದಲ್ಲಿ ಶೇ. 67, ದಕ್ಷಿಣ ಕನ್ನಡದಲ್ಲಿ ಶೇ. 72, ಹಾಸನದಲ್ಲಿ ಶೇ. 72, ಕೋಲಾರದಲ್ಲಿ ಶೇ. 73ರಷ್ಟು ಮತದಾನವಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಶೇ. 74.87ರಷ್ಟು ಮತದಾನವಾಗಿದೆ. ಇನ್ನುಳಿದಂತೆ ಮೈಸೂರಿನಲ್ಲಿ ಶೇ. 66, ತುಮಕೂರು ಶೇ. 72, ಚಿಕ್ಕಮಗಳೂರಿನಲ್ಲಿ ಶೇ. 72ರಷ್ಟು ಮತದಾನವಾಗಿದೆ. ಸಮಯ ಮುಗಿಯುತ್ತಿದ್ದಂತೆ ಅಧಿಕಾರಿಗಳು ಮತಗಟ್ಟೆಯ ಗೇಟ್ ಮುಚ್ಚಿ, ಮೊದಲೇ ಹೋದವರಿಗೆ ಮಾತ್ರ ಅವಕಾಶ ನೀಡಿದ್ದರು. ಎಲ್ಲ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆದಿದ್ದು, ಇವಿಎಂನಲ್ಲಿ ಭದ್ರವಾಗಿದೆ.
ಮೂಲ ಸೌಕರ್ಯ ವಂಚಿತ ಚಾಮರಾಜನಗರ ಜಿಲ್ಲೆಯ 5 ಹಳ್ಳಿಗಳಲ್ಲಿ ಮತದಾನ ಬಹಿಷ್ಕರಿಸಲಾಗಿತ್ತು. ಈ ಚುನಾವಣೆ ರಾಜ್ಯದಲ್ಲಿ ಮೊದಲಾದರೆ, ದೇಶದಲ್ಲಿ ಎರಡನೇ ಮತದಾನವಾಗಿದೆ. ತ್ರಿಪುರಾದಲ್ಲಿ ಶೇ. 77, ಮಣಿಪುರದಲ್ಲಿ ಶೇ. 76, ಮಹಾರಾಷ್ಟ್ರದಲ್ಲಿ ಶೇ. 53, ಮಧ್ಯಪ್ರದೇಶದಲ್ಲಿ ಶೇ. 55, ಉತ್ತರ ಪ್ರದೇಶದಲ್ಲಿ ಶೇ. 52, ಪಶ್ಚಿಮ ಬಂಗಾಳದಲ್ಲಿ ಶೇ. 71ರಷ್ಟು ಮತದಾನವಾಗಿದೆ.