ಬೆಂಗಳೂರು: ಲೋಕಸಭೆ ಚುನಾವಣೆಯ ಕಾವು ಜೋರಾಗಿದ್ದು, ಎಲ್ಲ ಪಕ್ಷಗಳು ಭರ್ಜರಿ ಪ್ರಚಾರದಲ್ಲಿವೆ. ಈ ಮಧ್ಯೆ ಕಾಂಗ್ರೆಸ್ ಪಕ್ಷವು ಐವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದೆ.
ಶಾಸಕರಾದ ತನ್ವೀರ್ ಸೇಠ್, ವಿನಯ್ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ವಸಂತ್ ಕುಮಾರ್ ರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಹಿಂದೆ ನೇಮಕವಾಗಿದ್ದ ಕಾರ್ಯಾಧ್ಯಕ್ಷರು ಸಚಿವ ಸ್ಥಾನಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ಸದ್ಯ ಬದಲಾವಣೆ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯ ಸಲೀಮ್ ಅಹ್ಮದ್ ಬದಲಾಗಿ ತನ್ವೀರ್ ಸೇಠ್ ಗೆ ಸ್ಥಾನ ನೀಡಲಾಗಿದೆ. ಒಕ್ಕಲಿಗ, ಲಿಂಗಾಯತ, ಬಂಟ ಸಮುದಾಯಕ್ಕೆ ಅವಕಾಶ ಕೂಡ ನೀಡಲಾಗಿದೆ.
ಸರ್ಕಾರ ರಚನೆಯಾಗಿ ಸಾಕಷ್ಟು ತಿಂಗಳು ಕಳೆದರೂ ಕಾರ್ಯಾಧ್ಯಕ್ಷರ ನೇಮಕ ಆಗಿರಲಿಲ್ಲ. ಇದರಿಂದ ಸಂಘಟನೆ ಕೆಲಸ ಕಾರ್ಯಗಳ ಮೇಲೂ ಪರಿಣಾಮ ಬೀರುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ. ಮಂಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ಸೊರಕೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಡಾ. ಎಲ್ ಹನುಮಂತಯ್ಯ, ರಿಜ್ವಾನ್ ಹರ್ಷದ್ ಅವರನ್ನು ಪ್ರಚಾರ ಸಮಿತಿ ಉಪ ಅಧ್ಯಕ್ಷರಾಗಿದ್ದಾರೆ.