ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಲಕ್ನೋ ತಂಡ 33 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್‌ಜೈಂಟ್ಸ್ ತಂಡ ಲೀಗ್ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿದೆ.
ಈ ಮೂಲಕ ಲಕ್ನೋ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಮೊದಲು ಬ್ಯಾಟ್ ಮಾಡಿದ್ದ ಲಕ್ನೋ ತಂಡ 5 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತ್ತು. ತಂಡದ ಪರ ಸ್ಟೋಯ್ನಿಸ್ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ನಾಯಕನ ಆಟ ಆಡಿದ ರಾಹುಲ್ 33 ರನ್ಗಳಿಸಿದ್ದರು. ಈ ಮೂಲಕ ಲಕ್ನೋ ಪರ ಅವರು ದಾಖಲೆ ಮಾಡಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ 31 ಎಸೆತಗಳನ್ನಾಡಿದ್ದ ರಾಹುಲ್ 3 ಬೌಂಡರಿಗಳ ಸಹಿತ 33 ರನ್ ಗಳಿಸಿದರು. ಈ ಮೂಲಕ ಲಕ್ನೋ ಸೂಪರ್‌ಜೈಂಟ್ಸ್ ಪರ 1000 ರನ್ ಪೂರೈಸಿದ ಮೊದಲ ಆಟಗಾರರಾಗಿದ್ದಾರೆ.
ರಾಹುಲ್ ಇದುವರೆಗೆ ಲಕ್ನೋ ಸೂಪರ್ ಜೈಂಟ್ಸ್ ಪರ 28 ಪಂದ್ಯಗಳನ್ನು ಆಡಿದ್ದು, ಈ 28 ಪಂದ್ಯಗಳಲ್ಲಿ 42.33ರ ಸರಾಸರಿಯಲ್ಲಿ 1016 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 7 ಅರ್ಧಶತಕಗಳಿವೆ. ಐಪಿಎಲ್ 17 ನೇ ಸೀಸನ್‌ನಲ್ಲಿ ಇದುವರೆಗೆ 31.5 ಸರಾಸರಿಯಲ್ಲಿ 126 ರನ್ ಬಾರಿಸಿದ್ದಾರೆ. ಇದರಲ್ಲಿ 1 ಅರ್ಧಶತಕ ಇದೆ.