ಅತ್ಯಾಚಾರ ಸಂತ್ರಸ್ತೆಗೆ ಶಿಕ್ಷಕರೇ ಪರೀಕ್ಷೆಗೆ ಅವಕಾಶ ನೀಡದ ಅಮಾನವೀಯ ಘಟನೆಯೊಂದು ನಡೆದಿದೆ.
ಶಿಕ್ಷಕರೇ ಧೈರ್ಯ ಹಾಗೂ ಸ್ಥೈರ್ಯ ತುಂಬಿ ಮಾನಸಿಕವಾಗಿ ಸದೃಢವಾಗಿ ಮಾಡಬೇಕಿತ್ತು. ಆದರೆ, ಅವರೇ ದೂರ ಇಟ್ಟು ಮನಸ್ಸಿಗೆ ತೀವ್ರ ನೋವು ಮಾಡಿರುವ ಘಟನೆ ನಡೆದಿದೆ. ರಾಜಸ್ಥಾನದಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಮೇಲೆ ಕಳೆದ ವರ್ಷ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇದೇ ಕಾರಣ ಇಟ್ಟುಕೊಂಡು ಅಧಿಕಾರಿಗಳು ಆಕೆಗೆ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಬಿಡದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಪರೀಕ್ಷೆಗೆ ಹಾಜರಾದರೆ ವಾತಾವರಣ ಹಾಳಾಗುವುದು ಎಂದು ಶಾಲಾ ಅಧಿಕಾರಿಗಳು ಹೇಳಿ ಆಕೆಯನ್ನು ಅಲ್ಲಿಂದ ಕಳುಹಿಸಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾರೆ. ಅಜ್ಮೀರ್‌ನ ಖಾಸಗಿ ಶಾಲೆಯು ವಿದ್ಯಾರ್ಥಿನಿ 4 ತಿಂಗಳಿನಿಂದ ತರಗತಿಗಳಿಗೆ ಹಾಜರಾಗದ ಕಾರಣ ಪ್ರವೇಶ ಪತ್ರವನ್ನು ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ. ವಿದ್ಯಾರ್ಥಿನಿ ಬೇರೆ ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಅವರು ಕೂಡಲೇ ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ಸಲಹೆ ನೀಡಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಪ್ರವೇಶ ಪತ್ರವನ್ನು ತೆಗೆದುಕೊಳ್ಳಲು ಹೋದಾಗ, ಅವಳು ಇನ್ನು ಮುಂದೆ ಶಾಲೆಯ ವಿದ್ಯಾರ್ಥಿಯಲ್ಲ ಎಂದು ಹೇಳಲಾಗಿತ್ತು. ಆಕೆಯ ಅತ್ಯಾಚಾರದ ನಂತರ ಇತರ ವಿದ್ಯಾರ್ಥಿಗಳ ಪೋಷಕರು ಆಕೆಯ ಉಪಸ್ಥಿತಿಯನ್ನು ವಿರೋಧಿಸಿದ್ದರಿಂದ ಶಾಲೆಯು ತನ್ನನ್ನು ಪ್ರವೇಶಿಸದಂತೆ ನಿರ್ಬಂಧಿಸಿದೆ ಎನ್ನಲಾಗಿದೆ. ಈ ವಿದ್ಯಾರ್ಥಿನಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಆಕೆ ಶೇ. 79ರಷ್ಟು ಅಂಕ ಗಳಿಸಿದ್ದಳು. ಶಾಲೆಯ ಈ ನಿರ್ಧಾರದಿಂದಾಗಿ ಅವಳು ಮತ್ತಷ್ಟು ಮಾನಸಿಕವಾಗಿ ಕುಗ್ಗಿದ್ದಾಳೆ ಎನ್ನಲಾಗಿದೆ.