ನವದೆಹಲಿ: ಲೋಕಸಭೆ ಚುನಾವಣೆಯ ಕಾವು ರಂಗೇರಿದ್ದು, ಈಗಾಗಲೇ ಎಲ್ಲ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುತ್ತಿವೆ. ಕಾಂಗ್ರೆಸ್ ಕೂಡ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲಿರುವ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಆದರೆ, ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇದನ್ನು ಗಮನಿಸಿದರೆ, ಗಾಂಧಿ ಕುಟುಂಬ ಈ ಕ್ಷೇತ್ರದಿಂದ ಹಿಂದೆ ಸರಿಯಲಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ರಾಯ್ ಬರೇಲಿ ಹಾಗೂ ಅಮೇಥಿ ಕ್ಷೇತ್ರಗಳು ಹಿಂದೆ ಗಾಂಧಿ ಕುಟುಂಬದ ಹಿಡಿತದಲ್ಲಿರುವ ಕ್ಷೇತ್ರಗಳು. ಆದರೆ, ಬದಲಾದ ರಾಜಕೀಯ ವಿದ್ಯಾಮಾನದಿಂದಾಗಿ ಅಲ್ಲಿ ಕಾಂಗ್ರೆಸ್ ಹಿಡಿತ ತಪ್ಪಿಸಿಕೊಳ್ಳುತ್ತಿದೆ. ಕಳೆದ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಸೋನಿಯಾ ಗಾಂಧಿ ಗೆಲುವು ಸಾಧಿಸಿದ್ದರು. ಆದರೆ, ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡಿದ್ದರು.
ಆದರೆ, ಇದುವರೆಗೂ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡದಿರುವುದನ್ನು ಗಮನಿಸಿದರೆ, ಗಾಂಧಿ ಕುಟುಂಬ ಅಲ್ಲಿಂದ ಹಿಂದೆ ಕಾಲ್ಕಿಳ್ಳಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಐದನೇ ಹಂತದ ಮತದಾನದ ಕಾರಣ ರಾಯ್ ಬರೇಲಿ ಮತ್ತು ಅಮೇಥಿಯ ಅಭ್ಯರ್ಥಿಗಳ ಪಟ್ಟಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.
ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಿಂದೆಂದೂ ಇಷ್ಟೊಂದು ವಿಳಂಬ ಆಗಿರಲಿಲ್ಲ. ಈ ಬಾರಿ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಚುನಾವಣೆಯಲ್ಲಿ ಸೋತ ನಂತರ ಅಮೇಥಿಯಲ್ಲಿ ರಾಹುಲ್ ಮತ್ತೆ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಊಹಾಪೋಹಗಳಿವೆ. ಇನ್ನೊಂದೆಡೆ ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದುವರೆಗೂ ಯಾವುದೇ ಘೋಷಣೆಯಾಗದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.