ಅಯೋಧ್ಯೆ: ಬರೋಬ್ಬರಿ 50 ದಶಕಗಳ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಮಂದಿರ ನಿರ್ಮಾಣವಾದ ನಂತರ ಇದೇ ಮೊದಲ ಬಾರಿಗೆ ಭಕ್ತರು ರಾಮನವಮಿ ಆಚರಿಸಿದ್ದಾರೆ. ಇಂದೇ ಬಾಲರಾಮನಿಗೆ ಸೂರ್ಯ ಅಭಿಷೇಕ ನಡೆದಿದೆ.
ಶ್ರೀರಾಮನ ಜನ್ಮ ಮುಹೂರ್ತದ ವೇಳೆಯಲ್ಲೇ ಮಧ್ಯಾಹ್ನ 12 ಗಂಟೆಯ ನಂತರ ಸೂರ್ಯ ರಶ್ಮಿ ರಾಮ ಲಲ್ಲಾನ ವಿಗ್ರಹದ ಹಣೆ ಸ್ಪರ್ಶಿಸಿದೆ. ಮಂದಿರದಲ್ಲಿ ಸೂಕ್ತ ಸ್ಥಳಗಳಲ್ಲಿ ಅಳವಡಿಸಿರುವ ಮಸೂರಗಳು ಸೂರ್ಯನ ಕಿರಣವನ್ನು ರಾಮ ಲಲ್ಲಾ ಮೂರ್ತಿಯ ಹಣೆಗೆ ಸ್ಪರ್ಶಿಸಿದವು. ಯಾವುದೇ ಬ್ಯಾಟರಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಕೆ ಮಾಡದೇ ಸೂರ್ಯನ ಕಿರಣಗಳು ನೇರವಾಗಿ ಬಾಲ ರಾಮನ ಹಣೆ ಸ್ಪರ್ಶಿಸುವಂತೆ ಮಾಡಲು ಮಸೂರಗಳನ್ನು ಮಾತ್ರ ಇಲ್ಲಿ ಬಳಸಿದ್ದು ವಿಶೇಷವಾಗಿತ್ತು.
ರಾಮ ನವಮಿಯ ಹಿನ್ನೆಲೆಯಲ್ಲಿ ರಾಮಮಂದಿರ ಸುಂದರವಾಗಿ ಅಲಂಕೃತಗೊಂಡಿದೆ. ವಿಶೇಷ ಪೂಜಾ-ಕೈಂಕರ್ಯಗಳು ಕೂಡ ನಡೆದಿವೆ. ಈ ವಿಶೇಷ ದಿನದಂದು ಭಕ್ತರಿಗೆ ರಾತ್ರಿ 11 ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಮನಿಗೆ ಉಣಬಡಿಸಲು 56 ಬಗೆಯ ಭೋಗ್ ಪ್ರಸಾದಗಳನ್ನು ಸಿದ್ಧಪಡಿಸಲಾಗಿದೆ. ದೇವ್ರ ಹಂಸ್ ಟ್ರಸ್ಟ್ ನಿಂದ ಈಗಾಗಲೇ 1,11,111 ಕೆ.ಜಿ ಲಡ್ಡು ಪ್ರಸಾದವನ್ನು ಅಯೋಧ್ಯೆಗೆ ನೀಡಲಾಗಿದೆ. ರಾಮನವಮಿಯ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.