ಹೌದು, ಪುನೀತ್ ರಾಜ್ ಕುಮಾರ್ ತೀರಿಕೊಂಡ ನಂತರದಲ್ಲಿ ದೊಡ್ಮನೆ ಅಭಿಮಾನಿಗಳಿಗೆ ಸಿಕ್ಕ ಹೊಸ ಆಶಾಕಿರಣ ಈ ಯುವರಾಜ್ಕುಮಾರ್. ರಗಡ್ಹು ಲುಕ್ಕಲ್ಲಿ ಕಾಣಿಸುವ ಹುಡುಗ ಸ್ವಲ್ಪ ಚುರುಕಾಗಿದ್ದು, ಅಲ್ಲೊಂದು ಪುನೀತ್ ರಿಪ್ಲೇಸ್ಮೆಂಟ್ ಛಾಯೆ ಕಾಣತೊಡಗಿದೆ. ಅಭಿಮಾನಿಗಳು ಈತ ಹೋದಲ್ಲಿ ಬಂದಲ್ಲಿ “ಪುನೀತ್.. ಪುನೀತ್..” ಎನ್ನುತ್ತಾ ಪುಳಕಿತರಾಗುತ್ತಿದ್ದಾರೆ. ಅಂದಹಾಗೆ, ಈ “ಯುವ” ಚಿತ್ರ ಅನೌನ್ಸ್ ಆದ ದಿನದಿಂದಲೂ ಕುತೂಹಲವಿದ್ದೇ ಇತ್ತು. ಸದ್ಯ ಟ್ರೈಲರ್ ಬಿಡುಗಡೆ ಕಂಡು ಸಖತ್ ನಿರೀಕ್ಷೆ ಮೂಡಿಸಿದೆ. ಇದೇ ಮಾರ್ಚ್ 29ಕ್ಕೆ ಚಿತ್ರ ತೆರೆ ಏರಲಿದೆ. ಪುನೀತ್ ರಾಜ್ಕುಮಾರ್ ಜೊತೆ ರಾಜಕುಮಾರ, ಯುವರತ್ನದಂಥಹ ಯಶಸ್ವಿ ಚಿತ್ರ ಕೊಟ್ಟಿದ್ದ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಯುವ ಚಿತ್ರ ಮೂಡಿ ಬಂದಿದ್ದು, ಅಭಿಮಾನಿಗಳ ಖುಷಿ ದುಪ್ಪಟ್ಟಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಟ್ರೈಲರ್ ಕಾಣಿಸಿದ್ದು, ಚಿತ್ರದ ಬಗ್ಗೆ ಕಾತರದಿಂದ ಹೆಚ್ಚಾಗಿದೆ.
ಹಾಗೆ ನೋಡಿದರೆ, ಸದ್ದು ಮಾಡುತ್ತಲೇ ಬಂದಿರುವ ಯುವ ಚಿತ್ರಕ್ಕೆ ಬಿಡುಗಡೆಯ ವಾರದಲ್ಲಿ ಅಂಥ ಪೈಪೋಟಿ ನೀಡುವ ಚಿತ್ರಗಳಿಲ್ಲ. ಹಾಗಾಗಿ ಗಾಂಧಿನಗರದಲ್ಲಿ ರಿಲೀಸ್ ಭರಾಟೆ ಜೋರಾಗಿಯೇ ನಡೆದಿದೆ. ಒಟ್ಟಿನಲ್ಲಿ ‘ಯುವರಾಜ್ಕುಮಾರ್ ಮೂಲಕ ರಾಜ್ ಕುಟುಂಬದ ಮತ್ತೊಬ್ಬ ಭರವಸೆಯ ಕುಡಿ, ಭದ್ರವಾದ ತಳಪಾಯ ಹಾಕಿಕೊಳ್ಳಲಿ’ ಎಂಬ ದೊಡ್ಮನೆ ಅಭಿಮಾನಿಗಳ ಆಶಯದ ಪಲಿತಾಂಶಕ್ಕೆ, ಮಾರ್ಚ್ ಇಪ್ಪತ್ತೊಂಬತ್ತರವರೆಗೂ ಕಾಯಬೇಕು.