ಬೆಂಗಳೂರು: ಸಿಲಿಕಾನ್ ಸಿಟಿಯ ಬಸವೇಶ್ವರನಗರದಲ್ಲಿ ನಡೆದಿದ್ದ ಯೋಗೇಶ್ ಸಾವಿನ ಪ್ರಕರಣ ಈಗ ಹೊಸ ಟ್ವಿಸ್ಟ್ ಪಡೆದಿದೆ.
ಕುಡಿತದ ಚಟ ಬಿಡಿಸಲಾಗದೆ ತಂದೆ ಪ್ರಕಾಶ್ ಮಗ ಯೋಗೇಶ್ನನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಂಬಿಸಿದ್ದ ಎಂಬುವುದು ಸದ್ಯ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಆರೋಪಿ ತಂದೆ ಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಯೋಗೇಶ್ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತಿದ್ದ. ಆದರೆ, ಆತ ಇತ್ತೀಚೆಗೆ ಮದ್ಯ ವ್ಯಸನಿಯಾಗಿದ್ದು, ಇದರಿಂದ ತಂದೆ ಬೇಸತ್ತು ಹೋಗಿದ್ದರು. ಈ ವಿಚಾರವಾಗಿ ತಂದೆ ಹಾಗೂ ಮಗನ ಮಧ್ಯೆ ಹಲವು ಬಾರಿ ಜಗಳ ನಡೆದಿವೆ. ಜಗಳದ ನಡುವೆ ಆರೋಪಿ ಪ್ರಕಾಶ್ ಮಗ ಯೋಗೇಶ್ನ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಯೋಗೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ರೀತಿ ಬಿಂಬಿಸಿದ್ದಾನೆ. ಆದರೆ ಪೊಲೀಸರಿಗೆ ಹಿಂದಿನ ದಿನ ಮನೆಯಲ್ಲಿ ಗಲಾಟೆ ನಡೆದಿರುವುದು ಕೂಡ ಗೊತ್ತಾಗಿದೆ. ಆಗ ತನಿಖೆ ಕೈಗೊಂಡಾಗ ಈ ವಿಷಯ ಬೆಳಕಿಗೆ ಬಂದಿದೆ. ಮರಣೋತ್ತರ ಪರಿಕ್ಷೆಯಲ್ಲಿ ಕೂಡ ಇದು ಕೊಲೆ ಎಂದು ಬಂದಿದೆ. ನಂತರ ಪ್ರಕಾಶ್ ನನ್ನು ವಶಕ್ಕೆ ಪಡೆದಾಗ ನಿಜ ಸಂಗತಿ ಬಯಲಿಗೆ ಬಂದಿದೆ.