ಈತ ಜಾಫರ್ ಸಾದಿಕ್.. ೨೦೦೦ ಕೋಟಿ ರೂಪಾಯಿ ಮೌಲ್ಯದಷ್ಟು ಭಾರಿ ಮೊತ್ತದ ಮಾದಕ ದ್ರವ್ಯ ಕಳ್ಳಸಾಗಣೆ ಹಾಗೂ ಮಾರಾಟ ಜಾಲದ ಪ್ರಮುಖ ಆರೋಪಿ. ಕೆಲವು ವಾರಗಳಿಂದ ತಲೆಮರೆಸಿಕೊಂಡಿದ್ದ ಈತ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದ ತನಿಖೆ ಕೈಗೊಂಡಿದ್ದ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ ಈತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಕಳೆದ ತಿಂಗಳು ನವದೆಹಲಿಯಲ್ಲಿ ನಡೆದ ಬೃಹತ್ ಕಾರ್ಯಾಚರನೆಯಲ್ಲಿ ಮಾದಕ ವಸ್ತು ನಿಗ್ರಹ ದಳ 50 ಕೆಜಿಯಷ್ಟು ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಡಿತ್ತು. ಈ ಕಾರ್ಯಾಚರನೆಯಲ್ಲಿ ತಮಿಲುನಾಡಿನ ಮೂವರನ್ನು ಬಂಧಿಸಲಾಗಿತ್ತು. ಪ್ರಾಥಮಿಕ ವಿಚಾರನೆಯ ನಂತರ ಈ ಮಾದಕ ವಸ್ತು ಮಾರಾಟ ಜಾಲದ ಕಿಂಗ್ ಪಿನ್ ಬೇರೆ ಯಾರೂ ಅಲ್ಲ ಈ ಜಾಫರ್ ಸಾದಿಕ್ ಎಂದು ಗೊತ್ತಾಯ್ತು. ಅಂದಿನಿಂದ ಸಾದಿಕ್ ತಲೆಮರೆಸಿಕೊಂಡಿದ್ದ. ಆದ್ರೆ ಕೊನೆಗೂ ಈತನನ್ನು ತಮ್ಮ ಖೆಡ್ಡಾಕೆ ಕೆಡವುವಲ್ಲಿ ಎನ್ ಸಿ ಬಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
50 ಕೆಜಿ ಮಾದಕವಸ್ತು ವಶಪಡಿಸಿಕೊಂಡ ಎನ್ ಸಿ ಬಿ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಕೆಯಲ್ಲಿ ಗೊತ್ತಾದ ಅಂಶವೆಂದರೆ, ಈತ ಕಳೆದ ಮೂರು ವರ್ಷಗಳಲ್ಲಿ 2000 ಕೋಟಿ ರೂಪಾಯಿ ಮೌಲ್ಯದ 3500 ಕೆಜಿ ಮಾದಕವಸ್ತುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸಿದ್ದ. ಈತ ಸಾಮಾನ್ಯನಲ್ಲ, ಈತನೊಬ್ಬ ಇಂಟರ್ ನ್ಯಾಶನಲ್ ಡ್ರಗ್ ಪೆಡ್ಲರ್ ಅನ್ನೋ ವಿಷಯ ಅಧಿಕಾರಿಗಳಿಗೆ ಗೊತ್ತಯ್ತು. ಆ ನಂತರದ ತನಿಖೆಯಲ್ಲಿ ಕಂಡು ಬಂದ ಅಂಶವೇ ಈ ವೀಡಿಯೋದ ಹೈಲೈಟ್.
ತಮಿಳುನಾಡಿನ ಕಾನೂನು ಸಚಿವ ಎಸ್. ರೇಗುಪತಿ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರ ಗುಜರಾತ್ ಮಾದಕ ವಸ್ತುಗಳ ಕಳ್ಳಸಾಗಾಣೆಯ ಸ್ವರ್ಗ ಎಂದಿದ್ದರು. ಆದರೆ, ಈಗ ಅವರದ್ದೇ ಪಕ್ಷದ ನಾಯಕ ಇದೇ ಮಾದಕ ದ್ರವ್ಯದ ಡೀಲ್ ನಲ್ಲಿ ಡ್ರಿಲ್ ಗೆ ಒಳಗಾಗಿದ್ದಾನೆ ಅಂಶ ಬೆಳಕಿಗೆ ಬಂದಿದೆ.
ಇಲ್ಲಿಯವರೆಗೆ ಪಕ್ಷದಲ್ಲಿಯೇ ಓಡಾಡಿಕೊಂಡವನನ್ನು ಅಡುಗೆ ಮನೆಯವರೆಗೂ ಬಿಟ್ಟುಕೊಂಡು, ಈಗ ರಸ್ತೆಗೆ ತಳ್ಳಿದಂತೆ ಡಿಎಂಕೆ ವರ್ತಿಸುತ್ತಿದೆ. ಇತ್ತೀಚಿನವರೆಗೆ ಡಿಎಂಕೆ ನಾಯಕರ ಕಣ್ಮಣಿಯಾಗಿದ್ದ ಸಾದಿಕ್ ನನ್ನು ಇದೀಗ ಪಕ್ಷದಿಂದ ಉಚ್ಛಾಟಿಸಲಾಗಿದೆ. ಹೀಗೆಂದ ಮಾತ್ರಕ್ಕೆ ಪಕ್ಷದೊಂದಿಗಿನ ಆತನ ನಂಟು ಕಳಚಿಹೋಗಿಬಿಡುತ್ತಾ? ಖಂಡಿತ ಇಲ್ಲ.
ಡಿಎಂಕೆಯ ಈ ನಡೆ ಸಹಜವಾಗಿ ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದೆ. ಹಾಗಾದರೆ ಸಾದಿಕ್ ನ ನಂಟು ಪಕ್ಷದೊಂದಿಗೆ ಯಾವ ರೀತಿ ಇತ್ತು? ಪಕ್ಷಕ್ಕೆ ಸಾದಿಕ್ ಏನೂ ಮಾಡಿಲ್ಲವಾ? ನಾಯಕರೊಂದಿಗೆ ಸಾದಿಕ್ ನ ಸಂಬಂಧ ಏನು? ಅನ್ನೋ ಪ್ರಶ್ನೆಗಳಿಗೆ ಈಗ ಉತ್ತರ ಹುಡುಕೋಣ.
ಜಾಫರ್ ಸಾದಿಕ್ ಮಾದಕ ವಸ್ತು ಸಾಗಾಟ ದಂಧೆಯ ನಂಟು ಹೊಂದಿರುವ ಡಾನ್. ಅಷ್ಟೇ ಅಲ್ಲ, ಈತ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ನಾಯಕ ಕೂಡ. ಈತ ಡಿಎಂಕೆ ಪಕ್ಷದ ವಿದೇಶಿ ಅನಿವಾಸಿ ಘಟಕದ ಸಂಯೋಜಕನಾಗಿದ್ದ. ಈಗ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ಗೆ 2 ಸಾವಿರ ಕೋಟಿ ರೂ.ಗಳ ಮಾದಕ ವಸ್ತುಗಳನ್ನು ಕಳ್ಳ ಸಾಗಣೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಬಂಧಿತ ಸಾದಿಕ್ ಮಂಗೈ ಎಂಬ ಸಿನಿಮಾ ನಿರ್ಮಾಣ ಮಾಡಿದಾಗ ಆ ಚಿತ್ರದ ಹಾಡನ್ನು ಉದಯನಿಧಿ ಸ್ಟಾಲಿನ್ ಅವರ ಪತ್ನಿ ಬಿಡುಗಡೆ ಮಾಡಿದ್ದರು.
ಮೈಚೊಂಗ್ ಸೈಕ್ಲೋನ್ ನಿಂದ ತಮಿಳುನಾಡು ತತ್ತರಿಸಿದ್ದ ಸಂದರ್ಭದಲ್ಲಿ ಇದೇ ಸಾದಿಕ್ ಉದಯನಿಧಿ ನೇತೃತ್ವದ ಸರ್ಕಾರಕ್ಕೆ 10 ಲಕ್ಷ ರೂ. ದೇಣಿಗೆ ನೀಡಿದ್ದ. ಉದಯನಿಧಿ ಟ್ವೀಟ್ ಮೂಲಕ ಈ ವಿಷಯ ಹಂಚಿಕೊಂಡು ಸಂಭ್ರಮಿಸಿದ್ದರು. ಆದರೆ, ಈಗ ಅದನ್ನು ಡಿಲೀಟ್ ಮಾಡಿದ್ದಾರೆ. ಇರಲಿ… ಈತ ಇದೇ ಹಣದಿಂದ ಚಿತ್ರ ನಿರ್ಮಾಣ ಮಾಡುತ್ತಿದ್ದದ್ದು ಈ ಮಾದಕ ವಸ್ತು ಮಾರಾಟದ ಹಣದಿಂದಲೇ ಎಂಬುದು ಈಗ ಬಹಿರಂಗವಾಗಿದೆ. ಹಾಗಾದರೆ ಈತ ಡ್ರಗ್ಸ್ ದಂಧೆಯಿಂದ ಬಂದ ಹಣದಿಂದ ಕೇವಲ ಸಿನಿಮಾ ಮಾಡುತ್ತಿದ್ದನಾ? ಅಥವಾ ಪಕ್ಷ ಚಟುವಟಿಕೆಗೂ ತೊಡಗಿಸಿದ್ದನಾ ಎಂಬ ಚರ್ಚೆ ಈಗ ಶುರುವಾಗಿದೆ.
ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಸರ್ಕಾರವು ಮಾದಕ ದ್ರವ್ಯ ವಿಷಯದಲ್ಲಿ ಸಾಕಷ್ಟು ಬಾರಿ ಎಚ್ಚರಿಕೆ ನೀಡಿತ್ತು. ತಮಿಳುನಾಡಿನಲ್ಲಿ ಡ್ರಗ್ಸ್ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಎಚ್ಚರಿಸಿತ್ತು. ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ, ಇದು ನಮ್ಮ ಮೇಲೆ ನಡೆಯುತ್ತಿರುವ ದಾಳಿ ಎಂಬಂತೆ ತಮಿಳುನಾಡು ವರ್ತಿಸುತ್ತಿತ್ತು. ಸದ್ಯ ಈಗ ಸರ್ಕಾರದ ನಾಯಕನೇ ಈ ದಂಧೆಯಲ್ಲಿ ಸಿಲುಕಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದೆ. ಈತ ಈ ಹಣವನ್ನು ಕೇವಲ ಸಿನಿಮಾ ನಿರ್ಮಾಣಕ್ಕೆ ಮಾತ್ರ ಬಳಕೆ ಮಾಡುತ್ತಿದ್ದನಾ? ಅಥವಾ ಇದರ ಪಾಲು ಬೇರೆ ಬೇರೆ ಕಡೆ ತೆರಳುತ್ತಿತ್ತಾ ಎಂಬ ಚರ್ಚೆ ಕೂಡ ವ್ಯಾಪಕವಾಗಿದೆ.
ಸಾದಿಕ್ ತಲೆಮರೆಸಿಕೊಂಡ ಸಂದರ್ಭದಲ್ಲಿ ತಮಿಳುನಾಡಿನ ಬಿಜೆಪಿ ನಾಯಕ ತಮ್ಮ ಎಕ್ಸ್ ಖಾತೆಯಲ್ಲಿ ಕೆಲವು ಮಾಹಿತಿ ಹಂಚಿಕೊಂಡಿದ್ದರು. ಆ ಮಾಹಿತಿಯ ಪ್ರಕಾರ ಜಾಫರ್ ಸಾದಿಕ್ ಚೆನ್ನೈ ಪಶ್ಚಿಮ ಜಿಲ್ಲೆಯ ಉಪ ಸಂಯೋಜಕನೂ ಆಗಿದ್ದ. ಈತನ ಸಹೋದರ ಮೊಹಮ್ಮದ್ ಸಲೀಂ ಚೆನ್ನೈ ಕೇಂದ್ರ ವಿಭಾಗದ ಲಿಬರೇಶನ್ ಟೈಗರಸ್ ಆಫ್ ಇಂಡಿಯಾದ ಉಪ ಕಾರ್ಯದರ್ಶಿಯಾಗಿದ್ದ. ಇದೀಗ ಸಾದಿಕ್ ನನ್ನು ಡಿಎಂಕೆ ಪಕ್ಷ ಉಚ್ಛಾಟಿಸಿದೆ. ಹೀಗೆಂದ ಮಾತ್ರಕ್ಕೆ ಆ ನಂಟು ಕಳಚಿಬೀಳುತ್ತಾ? ಆ ನಂಟು ಗಟ್ಟಿಯಾಗಿದ್ದದ್ದಕ್ಕೇ ಸಾದಿಕ್ ಇಷ್ಟು ದಿನ ತಲೆಮರೆಸಿಕೊಂಡಿರುವುದು ಎನ್ನುವುದು ಅಣ್ಣಾಮಲೈ ಆರೋಪವಾಗಿತ್ತು.
ಈಗಾಗಲೇ ಸಾದಿಕ್ ಕೂಡ ಈ ಹಣವನ್ನೇ ಉದ್ಯಮ, ಸಿನಿಮಾ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ವಿನಿಯೋಗಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಾಗಾದರೆ ಡಿಎಂಕೆ ಪಕ್ಷದ ಯಾವ ಯಾವ ನಾಯಕರು ಆತನ ವ್ಯಾಪಾರ, ಉದ್ಯಮದ ಭಾಗವಾಗಿದ್ದರು ಎಂಬುವುದು ಮುಂದಿನ ತನಿಖೆಯಿಂದ ಬಹಿರಂಗವಾಗಬೇಕಷ್ಟೆ.