ಒಂದಿಲ್ಲ ಒಂದು ಕಾರ್ಯದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳುತ್ತಾರೆ. ಈ ಕಾರಣದಿಂದನೇ ಬಹುತೇಕರಿಗೆ ಮೋದಿ ಮನಸ್ಸಿಗೆ ಹತ್ತಿರವಾಗ್ತಾರೆ. ಅಂಥಃದ್ದೆ ಒಂದು ವಿಶೇಷ ಕಾರ್ಯಕ್ರಮದ ಮೂಲಕ ಭಾರತದ ಈಶಾನ್ಯ ಭಾಗದ ಜನರ ಮನ ಗೆದ್ದಿರುವ ಮೋದಿ ಆಸ್ಸಾಮನ ಜೊರ್ಹಾಟನಲ್ಲಿ ಲಾಚಿತ್ ಬೊರ್ಫುಕಾನ್ ಅವರ ಭವ್ಯ ಪ್ರತಿಮೆ ಅನಾವರಣಗೊಳಿಸಿದ್ದಾರೆ.
ಅಷ್ಟಕ್ಕೂ ಈ ಲಾಚಿತ್ ಬೊರ್ಫುಕಾನ್ ಯಾರು ಎಂಬುದನ್ನು ತಿಳಿಯುವುದಕ್ಕೂ ಮೊದಲು ಆಸ್ಸಾಮಿನ ವಿಶಿಷ್ಟ ಸಂಸ್ಕೃತಿ ಹಾಗೂ ಈ ಪ್ರದೇಶವನ್ನಾಳಿದ ಅಹೋಮರ ಬಗ್ಗೆ ನೀವು ಅರಿಯಲೇಬೇಕು. 1228ರಿಂದ 1826 ಇಸವಿಯ ಭಾರತೀಯ ಚರಿತ್ರೆಯ ಪುಟಗಳಲ್ಲಿ ಅಹೋಮರ ಅಧ್ಯಾಯಗಳ ಬಗ್ಗೆ ಕಾಣಬಹುದು. ಭಾರತದ ಸಂಸ್ಕೃತಿಯ ಅವಿಭಾಜ್ಯವಾಗಿರುವ ಅಹೋಮರು ಅಥವಾ ತೈ ಅಹೋಮರು ಆಸ್ಸಾಮ ಹಾಗೂ ಅರುಣಾಚಲ ಪ್ರದೇಶದಲ್ಲಿ ವಾಸಿಸುವ ಜನಾಂಗ. ದಕ್ಷಿಣ ಚೀನಾ ಅಥವಾ ಮಯನ್ಮಾರದ ಹುಕ್ವಾಂಗ್ ಕಣಿವೆ ಮೂಲದವರು ಈ ಅಹೋಮರು.
1228ರಲ್ಲಿ ಅಹೋಮರ ನಾಯಕ ಚೌಲಂಗ್ ಸುಕಫಾ ತನ್ನ 9 ಸಾವಿರ ಹಿಂಬಾಲಕರನ್ನು ಕರೆದುಕೊಂಡು ಬ್ರಹ್ಮಪುತ್ರ ನದಿ ತೀರಕ್ಕೆ ಆಗಮಿಸಿ, ಅಲ್ಲೇ ಸಾಮ್ರಾಜ್ಯ ಸ್ಥಾಪಿಸಿದರು. ಸುಮಾರು 598 ವರ್ಷಗಳ ಕಾಲ ಅಹೋಮರು ಆಳ್ವಿಕೆ ನಡೆಸಿದರೂ ಭಾರತೀಯ ಚರಿತ್ರೆಯಲ್ಲಿ ಇವರು ಎಲೆಮರೆಯ ಕಾಯಿಯ ಹಾಗೆ ಅದೃಶ್ಯರಾಗಿದ್ದಾರೆ. ಚರೈಡಿಯೊ, ಈಗಿನ ಶಿವಸಾಗರ ಅಹೋಮರ ರಾಜಧಾನಿಯಾಗಿತ್ತು. ಒಟ್ಟು 41 ರಾಜರು ಈ ಸಾಮ್ರಾಜ್ಯವನ್ನು ಆಳಿದ್ದಾರೆ.
ನೀರಾವರಿ ಆಧಾರಿತ ಕೃಷಿ ಇವರ ಉಪಜೀವನದ ಮುಖ್ಯ ಕಾಯಕ. ಭತ್ತ ಬಿತ್ತನೆಯಲ್ಲಿ ಹೊಸ ತಂತ್ರಗಳನ್ನು ಆವಿಷ್ಕರಿಸಿದವರು ಇವರು. ಆರಂಭದಲ್ಲಿ ಅಹೋಮ ಭಾಷೆಯನ್ನಾಡುತ್ತಿದ್ದ ಈ ಜನಾಂಗ 17ನೇ ಶತಮಾನದಿಂದ ಆಸ್ಸಾಮಿ ಭಾಷೆ-ಸಂಸ್ಕೃತಿಯಲ್ಲಿ ವಿಲೀನವಾದರು. ಚೀನಿ ಲಿಪಿ ಸಾಮ್ಯತೆ ಹೊಂದಿದ್ದ ತೈ-ಕಡೈ ಎಂಬುದು ಇವರ ಲಿಪಿಯಾಗಿತ್ತು ಆದರೆ ಪ್ರಸ್ತುತ ಇದು ಅಸ್ತಿತ್ವದಲ್ಲಿ ಇಲ್ಲ. ಕಾಲಕ್ರಮೇಣ ಬರ್ಮನ್ ಹಾಗೂ ಈಸ್ಟ್ ಇಂಡಿಯಾ ಕಂಪನಿಯ ಆಕ್ರಮಣದಿಂದ ಅಹೋಮ ಸಾಮ್ರಾಜ್ಯ ಪತನಗೊಂಡಿತು ಎಂದು ಇತಿಹಾಸ ಸಾರುತ್ತದೆ.
ತಮ್ಮ ಕ್ಷಾತ್ರ ತೇಜಕ್ಕೆ ಹೆಸರಾದ ಅಹೋಮ ಪರಂಪರೆಯಲ್ಲಿ ಅನೇಕ ವೀರ-ಶೂರರು ಆಗಿ ಹೋಗಿದ್ದಾರೆ. ಅಂಥವರ ಸಾಲಿನಲ್ಲಿ ತನ್ನ ಪರಾಕ್ರಮ ಖ್ಯಾತಿಯಿಂದ ಈಗಲೂ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ವೀರನೇ ಲಚಿತ್ ಬೊರ್ಫುಕಾನ್. ಅಹೋಮ ಸೈನ್ಯವೆಂದರೆ ಲಾಚಿತ್ – ಲಾಚಿತ್ ಎಂದರೆ ಅಹೋಮ ಸೈನ್ಯ ಅಷ್ಟರಮಟ್ಟಿಗೆ ಇವನ ಶೌರ್ಯದ ಪ್ರಖ್ಯಾತಿ. 1622ರಲ್ಲಿ ಮೊಮೈ ತಮುಲಿ ಬೊರ್ಬರುವಾ ಅವರಿಗೆ ಜನಿಸಿದ ಲಾಚಿತ್ ಮುಂದೆ ಅಹೋಮ ಸೈನ್ಯದ ಸೈನ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾನೆ.
1615ರಿಂದ ಶುರುವಾದ ಮೊಘಲರ ದಾಳಿಯನ್ನು ಅಹೋಮ್ ಸೇನೆ ಅನೇಕ ಬಾರಿ ಹಿಮ್ಮೆಟ್ಟಿಸಿತು. ಶಹಾಜಹಾನ್ ಹಾಗೂ ಸಿಂಹಧ್ವಜ ರಾಜನ ಕಾಲದಲ್ಲಿ ಅನೇಕ ಬಾರಿ ನಡೆದ ಹೋರಾಟಗಳಲ್ಲಿ ಅಹೋಮ್ ಜನರ ಶೌರ್ಯ ಮತ್ತು ಅವರ ಯುದ್ಧ ತಂತ್ರಗಳು ಮೊಘಲ್ ಸೇನೆಯನ್ನು ಮಣ್ಣು ಮುಕ್ಕಿಸಿದವು. ಆದರೆ ಸತತವಾಗಿ ನಡೆದ ಯುದ್ಧಗಳಿಂದ ಬೇಸತ್ತ ಅಹೋಮ್ ಜನ ಮೊಘಲರು ನೀಡಿದ ಒಪ್ಪಂದದ ಕರೆಯನ್ನು ಮನ್ನಿಸಿದರು. ಎಷ್ಟೇ ಶಾಂತಿ ಒಪ್ಪಂದವಾದರೂ ಎರಡೂ ಸಾಮ್ರಾಜ್ಯಗಳ ನಡುವಿನ ಸಂಘರ್ಷ ನಿಂತಿರಲಿಲ್ಲ.
ನಂತರ ಚಕ್ರಸಿಂಹಧ್ವಜ ರಾಜ ಹಾಗೂ ಔರಂಗಜೇಬನ ಕಾಲದಲ್ಲಿ ಮತ್ತೊಂದು ದೊಡ್ಡ ಯುದ್ಧ ಸಂಭವಿಸಿತು. ಆಗ ಅಹೋಮ್ ಪ್ರದೇಶವನ್ನು ರಕ್ಷಿಸಲು ಮಹಾರಾಜನು ತನ್ನ ಸಮರ್ಥ ಸೇನಾನಿ ಲಾಚಿತ್ ಬೊರಫುಕಾನ್ನನ್ನು ತನ್ನ ಸೇನೆಯೊಂದಿಗೆ ಕಳುಹಿಸಿಕೊಟ್ಟನು. ತನ್ನ ಯುದ್ಧ ತಂತ್ರ, ಶೌರ್ಯದಿಂದ ಸೈರಾಘಾಟ್ ಎಂಬಲ್ಲಿ ನಡೆದ ಯುದ್ಧದಲ್ಲಿ ತನ್ನ ಸೇನೆಯ ಸುಮಾರು ಹತ್ತು ಪಾಲು ದೊಡ್ಡದಾದ ಮೊಘಲರ ಸೇನೆಯನ್ನು ಸಂಪೂರ್ಣವಾಗಿ ಸೋಲಿಸಿ ಓಡಿಸಿದ ಲಾಚಿತ್ ಬೋರಫುಕಾನ್, ಮಹಾರಾಜ ತನ್ನಲ್ಲಿಟ್ಟ ನಂಬಿಕೆಗೆ ಸಂಪೂರ್ಣ ನ್ಯಾಯ ಸಲ್ಲಿಸಿದನು. ನಿರಂತರವಾಗಿ ನಡೆದ ಸಂಘರ್ಷದಲ್ಲಿ ತನ್ನ ಸ್ವಂತದ ಅನಾರೋಗ್ಯವನ್ನೂ ಗಮನಿಸದೇ ಸಂಗ್ರಾಮಕ್ಕಿಳಿದ ಸೇನಾನಿ ಲಾಚಿತ್ ಬೋರಫುಕಾನ್ ಯುದ್ಧಭೂಮಿಯಲ್ಲೇ ವೀರ ಮರಣವನ್ನಪ್ಪಿದ.
ಇಂದಿಗೂ ಲಾಚಿತನ ಸ್ಮರಣಾರ್ಥ ಭಾರತದ ರಾಷ್ಟ್ರೀಯ ರಕ್ಷಣಾ ಸಂಸ್ಥೆ ತನ್ನ ಅತ್ಯುತ್ತಮ ವಿದ್ಯಾರ್ಥಿಗೆ ಲಾಚಿತ ಬೋರಫುಕಾನ್ನ ಹೆಸರಿನಲ್ಲಿ ಸ್ವರ್ಣ ಪದಕ ನೀಡುತ್ತದೆ. ಶಿವಾಜಿ, ರಾಣಾ ರಣಜಿತ್ ಸಿಂಗ್, ಛತ್ರಸಾಲ ಮೊಘಲರ ಸೊಲ್ಲಡಗಿಸಿದವರ ಪರಾಕ್ರಮಿಗಳ ಸಾಲಿನಲ್ಲಿ ಆಸ್ಸಾಮ ಪ್ರಾಂತ್ಯದ ಆರಾಧ್ಯನಾಗಿರುವ ಲಾಚಿತ್ ಬೊರಫುಕಾನ್ ಸಹ ಸೇರಿಕೊಳ್ಳುತ್ತಾನೆ.