ದೇಶದಾದ್ಯಂತ ಲೋಕಸಭಾ ಚುನಾವಣೆಯಲ್ಲಿ I.N.D.I.A ಗೆದ್ದು ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಕಾವೇರಿ ನದಿಗೆ ನಿರ್ಮಿಸಲು ಯೋಜಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಡೆಯುವುದಾಗಿ ಡಿಎಂಕೆ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದೆ. ಕರ್ನಾಟಕದ ವಿಚಾರದಲ್ಲಿ ಪ್ರತಿ ಬಾರಿಯೂ ಈ ರೀತಿ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಡಿಎಂಕೆ ಪಕ್ಷವು, ಬ್ರಿಟೀಷರ ಪಳೆಯುಳಿಕೆಯಂತೆ ಎಂದಿಗೂ ಜೋಡಿಸುವ (ಭಾರತ್ ಜೋಡೋ) ಮಾತಾಡೋದೇ ಇಲ್ಲ; ಬದಲಿಗೆ ಆಗಾಗ ಈ ರೀತಿಯ ಒಡೆಯುವ ಮಾತಾಡುತ್ತಾ ಉರಿಯುತ್ತಿರುವ ಸಂಬಂಧಕ್ಕೆ ತುಪ್ಪ ಸುರಿಯುತ್ತಲೇ ಬರುತ್ತಿದೆ. ಕಾವೇರಿ ವಿಚಾರದಲ್ಲಿ ಆಗಾಗ ಇಂಥಹ ಹಕೀಕತ್ತುಗಳು ನಡೆಯುತ್ತಲೇ ಇರುತ್ತವೆ. ಕರ್ನಾಟಕದ ಕಾವೇರಿಯನ್ನ ತಮ್ಮವಳೆನ್ನುತ್ತಾ, ಕನ್ನಡಿಗರನ್ನು ದೂರುತ್ತಾ, ಅಧಿಕಾರಕ್ಕೆ ಹತ್ತಿರವಾಗೋದು ಇವರುಗಳ ಕೀಳು ರಾಜಕೀಯ ಅಜೇಂಡಾ. ಈ ಹಿಂದೆ ಕರ್ನಾಟಕದಿಂದಲೇ ಹಾರಿ ಹೋಗಿ ಅಲ್ಲಿ ಬದುಕು ಕಟ್ಟಿಕೊಂಡಿದ್ದ ಜಯಲಲಿತಾ ಕೂಡ ಈ ಕಾವೇರಿ ವಿಚಾರದಲ್ಲೇ ಆತಿ ಹೆಚ್ಚು ಲಾಭ ಗಿಟ್ಟಿಸಿಕೊಂಡು ಕರ್ನಾಟಕಕ್ಕೆ ಮಗ್ಗುಲ ಮುಳ್ಳಾಗಿದ್ದಳು. ಕೊನೆಗೆ ಆಕೆಯ ದುರಂತ ಸಾವು ಇಂದಿಗೂ ನಿಗೂಢವಾಗಿಯೇ ಉಳಿದುಕೊಂಡಿದೆ. ಇದೀಗ ಡಿಎಂಕೆ ಪಕ್ಷವು ಚುನಾವಣೆಯ ಹೊತ್ತಲ್ಲಿ ಮತ್ತೆ ಕನ್ನಡಿಗರ ತಾಳ್ಮೆ ಪರೀಕ್ಷೆಗೆ ನಿಂತಿದೆ. ಮೇಕೆ ದಾಟು ಯೋಜನೆ ತಡೆಯುವುದಾಗಿ ಉದ್ಧಟತನದ ಮಾತಾಡಿದೆ. ಇದು ಪಕ್ಷಕ್ಕೆ ಮುಳುವಾಗಿ ಪರಿಣಮಿಸಲಿದೆ. ದೋಸ್ತಿ ಪಕ್ಷವನ್ನು ಇಕ್ಕಟ್ಟಿಗೆ ನೂಕಿದೆ. ಅಸಲಿಗೆ ಕಾಂಗ್ರೇಸಿಗರ ಕನಸಾದ “ಇಂಡಿಯಾ ಒಕ್ಕೂಟ”ದ ಜೋಡೋ ಜೊತೆಗಾರರಾದ ಡಿಎಂಕೆ ಪಕ್ಷದ ಈ ನಿಲುವು ಸದ್ಯ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೇಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿ ಬಾಯಿ ಸುಡುತ್ತಿದೆ. ಆಡುವಂತಿಲ್ಲ; ಮಾಡುವಂತಿಲ್ಲಎಂಬಂತಾಗಿದೆ ಪರಿಸ್ಥಿತಿ. ಒಟ್ಟಿನಲ್ಲಿ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಮೇಕೇದಾಟು ಯೋಜನೆ ನಿಲ್ಲಿಸುವ ಪ್ರಸ್ತಾಪ ಮಾಡಿರುವ ಡಿಎಂಕೆ ಪಕ್ಷವು ಪ್ರತಿಪಕ್ಷಗಳಿಗೆ ಆಹಾರವಾಗಿದ್ದಂತೂ ಸುಳ್ಳಲ್ಲ. ಮಾತಾಡಿ ಬಗೆ ಹರಿಸಿಕೊಳ್ಳುವ ಬದಲು ಮೈ ಪರಚಿಕೊಂಡು ಗಾಯ ಮಾಡಿಕೊಂಡಂತಾಗಿದೆ ಇವರ ಸದ್ಯದ ಸ್ಥಿತಿ. ಇಂಥಹ ಕೀಳು ಪೃವೃತ್ತಿಯ ರಾಜಕೀಯ ಡಿಎಂಕೆ ಪಕ್ಷಕ್ಕೆ ಶೋಭೆ ತರುವಂಥದ್ದಲ್ಲ. ಮೇಕೇದಾಟು ವಿಚಾರದಲ್ಲಿ ಕನ್ನಡಿಗರದ್ದು “ನಮ್ಮ ನೀರು ನಮ್ಮ ಹಕ್ಕು” ಇದೇ ಸತ್ಯ. ಇದೇ ನಿತ್ಯ.
