ದೆಹಲಿ: ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮೆದುಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
ಮೆದುಳಿನಲ್ಲಿ ಮಾರಣಾಂತಿಕ ಊತ ಹಾಗೂ ರಕ್ತಸ್ರಾವ ಆದ ಹಿನ್ನೆಲೆಯಲ್ಲಿ ಅವರು ತುರ್ತು ಮೆದುಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಇಶಾ ಫೌಂಡೇಶನ್ ಪೋಸ್ಟ್ ಮಾಡಿದ್ದು, ಸದ್ಗುರುವನ್ನು ಪರೀಕ್ಷಿಸಿದ ಅಪೋಲೋ ಆಸ್ಪತ್ರೆಯ ಹಿರಿಯ ನರವಿಜ್ಞಾನಿ ಡಾ ವಿನಿತ್ ಸೂರಿ, ಆಧ್ಯಾತ್ಮಿಕ ನಾಯಕ ಕಳೆದ ನಾಲ್ಕು ವಾರಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ.
ಸದ್ಗುರುಗೆ ಮಾರ್ಚ್ 15ರಂದು ತಲೆ ನೋವು ಜಾಸ್ತಿಯಾಗಿದೆ. ಆನಂತರ ವೈದ್ಯರು ಎಂಆರ್ ಐ ಮಾಡಲು ಒತ್ತಾಯಿಸಿದ್ದಾರೆ. ಸ್ಕ್ಯಾನ್ ಮಾಡಿದಾಗ ಮೆದುಳಿನಲ್ಲಿ ಭಾರೀ ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ CT ಸ್ಕ್ಯಾನ್ ಮಾಡಿದಾಗ ಮೆದುಳಿನಲ್ಲಿ ಜೀವಕ್ಕೆ ಅಪಾಯಕಾರಿ ಊತ ಮತ್ತು ರಕ್ತಸ್ರಾವ ಇರುವುದು ಕಂಡು ಬಂದಿದೆ. ಮೆದುಳು ಒಂದು ಬದಿಗೆ ಸರಿದಿತ್ತು. ಕೂಡಲೇ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಸದ್ಗುರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.