ಎಸ್! ಜಗ್ಗೇಶ್ ಮೈಕ್ ಹಿಡಿದು ನಿಂತರೆ, ನಗದೇ ಇದ್ದೋನೆ ಪಾಪಿ!. ತನ್ನವರನ್ನ ಪ್ರೀತಿಯಿಂದ ಕಾಲೆಳೆಯುತ್ತಲೇ ಬದುಕಿನ ಪಾಠ ಹೇಳುವ ಪರಿಪಾಠ ನಟ ಜಗ್ಗೇಶ್ಗೆ ಸಿದ್ಧಿಸಿದೆ. ತೆರೆಮೇಲೆ ನಗಿಸುವ ಇವರು, ತಮ್ಮ ಬದುಕಲ್ಲಿ ಸಖತ್ ಸೀರಿಯಸ್ ಪರ್ಸನ್. ಅದರಲ್ಲೂ ಧರ್ಮ, ಧಾರ್ಮಿಕ, ಕನ್ನಡದ ವಿಚಾರದಲ್ಲಂತೂ ಒಂದು ಹಿಡಿ ಹೆಚ್ಚೇ ಎನ್ನಬಹುದು. ಅಂಥಹದ್ದೇ ವಿಷಯ ಹೊತ್ತು, ತೆರೆಗೆ ಬರಲು ಸಿದ್ಧವಾದ ಸಿನಿಮಾವೇ ‘ರಂಗ ನಾಯಕ’. ‘ಕನ್ನಡದ ಅಸ್ಮಿತೆ’ಯ ಬಗ್ಗೆ ಮಾತನಾಡುವ ಈ ಚಿತ್ರಕ್ಕೆ ‘ಗುರುಪ್ರಸಾದ್’ ನಿರ್ದೇಶಕರು. ಈ ಸಿನಿಮಾದಲ್ಲಿ ಜಗ್ಗೇಶ್ ನಾಯಕನಾಗಿ ಮಾಧ್ಯಮದ ಮುಂದೆ ಸಿನಿಮಾದ ಅನುಭವ ತೆರೆದಿಡುತ್ತಾ “ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ನಗಿಸುವ ಜೊತೆ-ಜೊತೆಗೆ, ಕನ್ನಡದ ವಿಚಾರದಲ್ಲಿ ಬಹು ವಿಶೇಷವಾಗಿ ಏನೋ ಹೇಳಲು ಹೊರಟಿದ್ದೇವೆ. ಈ ಚಿತ್ರ ನೂರಾರು ವರ್ಷ ನೆನಪಿಡುವ ಚಿತ್ರವಾಗಿರಲಿದೆ”. ಎಂದರು.
ಈ ಹಿಂದೆ ‘ಮಠ’, ‘ಎದ್ದೇಳು ಮಂಜುನಾಥ’ದಂಥಹ ಭರ್ಜರಿ ಹಿಟ್ ಕೊಟ್ಟಿದ್ದ ನಿರ್ದೇಶಕ “ಗುರುಪ್ರಸಾದ್-ಜಗ್ಗೇಶ್” ಜೋಡಿ ಬರೋಬ್ಬರಿ ಹದಿನೈದು ವರ್ಷದ ನಂತರ, ಈ ರಂಗನಾಯಕ ಚಿತ್ರದ ಮೂಲಕ ಮತ್ತೊಂದು “ನಗುವಿನ ಗುಳಿಗೆ” ಹೊತ್ತು ಬಂದಿದೆ. ಕಚಗುಳಿ ಇಡುವ ಸಂಭಾಷಣೆಯೇ ಗುರುಪ್ರಸಾದ್ ಶಕ್ತಿ. ಆ ಸಂಭಾಷಣೆಗಳನ್ನು ಜಗ್ಗೇಶ್ ಬಾಯಲ್ಲಿ ಕೇಳೋದೇ ಒಂದು ಮಜಾ. ಈ ಇಬ್ಬರು ಒಂದೆಡೆ ಸೇರಿದ ಮೇಲೆ ಅಲ್ಲೊಂದು ನಗೆಲೋಕ ಫಿಕ್ಸು!. ಅಳೆದು-ತೂಗಿ ಕಟ್ಟಿರುವ ಚಿತ್ರವಿದು ಎಂದಿರುವ ಚಿತ್ರತಂಡ, “ಈ ಚಿತ್ರ ನಗುವಿನ ಜೊತೆಗೆ ಕನ್ನಡದ ವಿಚಾರದಲ್ಲಿ ಮನಮುಟ್ಟುವ ಚಿತ್ರವಾಗಲಿದೆ” ಎನ್ನುತ್ತಿದೆ. ಅದೇನೇ ಇರಲಿ, ಗುರುಪ್ರಸಾದ್ ಮತ್ತು ಜಗ್ಗೇಶ್ ಈ ಇಬ್ಬರಿಗೂ ಒಂದು ‘ಭರ್ಜರಿ ಗೆಲುವಿನ ಕಂಬ್ಯಾಕ್’ ಬೇಕಿದೆ. ಅದು ಈ ಚಿತ್ರದ ಮೂಲಕ ಸಿಗಲಿದೆ ಎಂಬ ನಿರೀಕ್ಷೆಲ್ಲಿ ಇಬ್ಬರೂ ಇದ್ದಂತಿದೆ. ಅದರಂತೆ ಚಿತ್ರ ತೆರೆಗೆ ತರಲು ಸಜ್ಜಾಗಿ, ಚಿತ್ರದ ಪರ ಪ್ರಚಾರ ಶುರುವಿಟ್ಟಿದ್ದಾರೆ.
ಹಾಗೆಯೇ ಈ ಚಿತ್ರಕ್ಕೆ ಎದುರಾಗಿ ಮತ್ತೊಂದು ಕನ್ನಡದ ನಿರೀಕ್ಷಿತ ಸಿನಿಮಾವಿದೆ. ಹೌದು, ಮುಂದಿನ ತಿಂಗಳ ಎಂಟನೇ ತಾರೀಕಿಗೆ ಬಿಡುಗಡೆ ಕಾಣುತ್ತಿರುವ ರಂಗನಾಯಕ ಚಿತ್ರಕ್ಕೆ ಎದುರಾಗಿ ಯೋಗರಾಜ್ ಭಟ್ ನಿರ್ದೇಶನದ ಶಿವರಾಜ್ಕುಮಾರ್- ಪ್ರಭುದೇವ ನಟನೆಯ ‘ಕರಟಕ-ದಮನಕ’ ಚಿತ್ರ ಅಂದೇ ತೆರೆಕಾಣುತ್ತಿದೆ. ಎರಡೂ ಚಿತ್ರಗಳ ಮೇಲೆ ಬಹು ಮಟ್ಟಿಗಿನ ನಿರೀಕ್ಷೆಯಂತೂ ಇಡಲಾಗಿದೆ. ಚಿತ್ರ ಅಂದುಕೊಂಡಂತೆಯೆ ಚೆನ್ನಾಗಿದ್ದು, ಯಾವ ಚಿತ್ರಕ್ಕೆ ಪ್ರೇಕ್ಷಕ ಫಿದಾ ಆಗುವನೋ ಕಾದು ನೋಡೋಣ. ಜೈ ಕನ್ನಡ ಪ್ರೇಕ್ಷಕ.