ನವದೆಹಲಿ: ಸಂಸದ ಸಿದ್ದೇಶ್ವರ್ ಪತ್ನಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಶಾಮನೂರು ಶಿವಶಂಕರಪ್ಪ ವಿರುದ್ಧ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕಿಡಿಕಾರಿದ್ದಾರೆ.
ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಮಾತ್ರ ಲಾಯಕ್ಕು. ಅವರಿಗೆ ಮಾತನಾಡುವ ಶಕ್ತಿ ಇಲ್ಲ ಎಂದು ಹೇಳಿಕೆ ನೀಡಿದ್ದಕ್ಕೆ ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ಮೂಲಕ ಸೈನಾ ಪ್ರತಿಕ್ರಿಯೆ ನೀಡಿದ್ದಾರೆ. ಶಾಮನೂರು ʻಸ್ತ್ರೀ ದ್ವೇಷಿʼ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಹಿಳೆಯನ್ನು ಅಡುಗೆ ಕೋಣೆಗೆ ಸೀಮಿತಗೊಳಿಸಬೇಕು ಅಂತಾ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಬಯಸಿದ್ದಾರೆ. ಆದರೆ, ಪ್ರತಿ ಮಹಿಳೆ ಹೋರಾಡುತ್ತಾಳೆ ಎಂಬ ತತ್ವದಲ್ಲಿ ನಂಬಿಕೆಯಿಟ್ಟುರುವ ಪಕ್ಷದ ಅಭ್ಯರ್ಥಿಯಾಗಿ ಗಾಯತ್ರಿ ಕಣದಲ್ಲಿದ್ದಾರೆ. ನಾನು ಭಾರತಕ್ಕಾಗಿ ಪದಕಗಳನ್ನು ಗೆದ್ದಾಗ ನಾನು ಏನು ಮಾಡಬೇಕೆಂದು ಕಾಂಗ್ರೆಸ್ ಪಕ್ಷ ಆದ್ಯತೆ ನೀಡುತ್ತಿತ್ತು? ಎಲ್ಲಾ ಹುಡುಗಿಯರು ಮತ್ತು ಮಹಿಳೆಯರು ತಮಗೆ ಇಷ್ಟವಾದ ಯಾವುದೇ ಕ್ಷೇತ್ರದಲ್ಲಿ ದೊಡ್ಡದಾಗಿ ಸಾಧಿಸಬೇಕೆಂದು ಕನಸು ಕಾಣುತ್ತಿರುವಾಗ ಹಾಗೆ ಏಕೆ ಹೇಳಬೇಕು? ಒಂದೆಡೆ ನಾವು ನಾರಿ ಶಕ್ತಿ ಕೋ ವಂದನ್ (ನಾರಿ ಶಕ್ತಿಗೆ ವಂದನೆ) ಮಾಡುತ್ತಿದ್ದೇವೆ. ನಮ್ಮ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲಾಗಿದೆ. ಇನ್ನೊಂದೆಡೆ, ನಾರಿ ಶಕ್ತಿಯನ್ನು ಅಪಮಾನಗೊಳಿಸುವ ಮತ್ತು ಸ್ತ್ರೀ ದ್ವೇಷದ ಜನ ಇರುವುದು ನಿಜಕ್ಕೂ ಅಸಮಾಧಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.