ಎಸ್! ಅಂತೂ ಕಾರ್ಮಿಕ ಇಲಾಖೆ ಕಡೆಗೂ ಕಣ್ತೆರೆದಿದೆ. ಚಿತ್ರೀಕರಣಕ್ಕೆ ಸಂಬಂಧಿಸಿದಂತೆ, ಬಾಲ ನಟ-ನಟಿಯರತ್ತ ಕಾರ್ಮಿಕ ಇಲಾಖೆಯವರು ಚಿತ್ತ ಹರಿಸಿದ್ದಾರೆ. ಅಸಲಿಗೆ ಇದು ಕಾರ್ಮಿಕ ಇಲಾಖೆಯ ಖಡಕ್ ಸಂದೇಶ ಎನ್ನಬಹುದು. ರಿಯಾಲಿಟಿ ಶೋ, ಧಾರಾವಾಹಿ,ಸಿನಿಮಾ ಸೇರಿದಂತೆ ಇನ್ನಿತರೇ ಯಾವುದೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಬಾಲ ನಟ-ನಟಿಯರ ವಿದ್ಯಾಭ್ಯಾಸದ ಜೊತೆ ಅವರ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು, ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸುವ ಮೂಲಕ ಎಚ್ಚರಿಸಿದೆ. ಹೌದು, ಇನ್ಮುಂದೆ ಯಾವುದೇ ಚಿತ್ರೀಕರಣದಲ್ಲಿ ಬಾಲ ನಟ-ನಟಿಯರು ಕಾಣಿಸಿಕೊಂಡಾಗ, ದಿನದಲ್ಲಿ ಐದು ಗಂಟೆಗೂ ಹೆಚ್ಚು ಕಾಲ ತೊಡಗಿಸಿಕೊಳ್ಳುವಂತಿಲ್ಲ. ಅದರಂತೆ, ಮಕ್ಕಳನ್ನು ತೊಡಗಿಸಿಕೊಳ್ಳುವ ಚಿತ್ರೀಕರಣಕ್ಕೆ ಮೊದಲು, ಆಯೋಜಕರು, ನಿರ್ಮಾಣ ಸಂಸ್ಥೆಯವರು, ಆಯಾಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯೋದು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಯಾವುದೇ ಸಂದರ್ಭದಲ್ಲೂ ಐದು ಗಂಟೆಗಿಂತ ಹೆಚ್ಚು ಕಾಲ ಮಕ್ಕಳನ್ನು ಚಿತ್ರೀಕರಣದಲ್ಲಿ ಬಳಸಿಕೊಳ್ಳೋದು ಕಾನೂನು ರೀತಿಯ ಅಪರಾಧ ಎಂಬಂತೆ ತಿಳಿಸಿ, ಕಾರ್ಮಿಕ ಇಲಾಖೆಯಿಂದ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ‘ಯಾವುದೇ ಕಾರಣಕ್ಕೂ ಕಲೆಯ ಹೆಸರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿರಿ’ ಎಂದು ಇಲಾಖೆ ಸುತ್ತೋಲೆಯಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಒಟ್ಟಿನಲ್ಲಿ ಪೋಷಕರ ಆಸೆಗೆ ಏನೂ ಅರಿಯದ ಅಮಾಯಕ ಮಕ್ಕಳು ಚಿತ್ರೀಕರಣದ ನೆಪದಲ್ಲಿ ಗಂಟೆಗಟ್ಟಲೇ ಚಿತ್ರೀಕರಣದಲ್ಲಿ ತೊಡಗಿಸಿಕೊಂಡು ಹೈರಾಣಾಗೋದು ತಪ್ಪಿಸಿದಂತಾಯಿತು. ಸದ್ಯ ಕರ್ನಾಟಕ ಸರ್ಕಾರದ ವತಿಯಿಂದ ಜಾರಿಯಾದ ಈ ಕಾನೂನು ಕ್ರಮವು, ಮಕ್ಕಳ ಪಾಲಿಗೆ ಬಹುದೊಡ್ಡ ಬೆಳವಣಿಗೆಯಾಗಿದೆ.