ಭೂಮಿ ಮೇಲೆ ಮೂರು ಭಾಗದಷ್ಟು ನೀರಿದ್ದರೂ ಜಲಕ್ಷಾಮ ಕಾಡುತ್ತಲೇ ಇರುತ್ತದೆ. ಈಗ ಭೂಮಿಯ ಮೇಲೆ ಅಷ್ಟೇ ಅಲ್ಲ ಭೂಮಿಯ ಒಡಲಾಳದಲ್ಲಿಯೂ ನೀರಿದೆ ಎಂಬುವುದನ್ನು ತಜ್ಞರು ಸಾಬೀತು ಮಾಡಿದ್ದಾರೆ. ಭೂ ತಾಯಿ ತನ್ನ ಒಡಲಾಳದಲ್ಲಿ ಬೃಹತ್ ಆದ ಸುಪ್ತ ಸಾಗರ ಇಟ್ಟುಕೊಂಡಿದ್ದಾಳೆ.
ಅದು ಕೂಡ ಭೂಮಿಯ ಮೇಲ್ಮೈಗಿಂತಲೂ ಅದರ ಒಡಲಾಳದಲ್ಲಿ ಹೆಚ್ಚಿನ ನೀರಿದೆ ಎನ್ನಲಾಗಿದೆ. ಭೂಮಿಯ ಮೇಲ್ಮೈನಿಂದ ಸುಮಾರು 700 ಕಿ.ಮೀ ಆಳದಲ್ಲಿ ಈ ಸುಪ್ತ ಸಾಗರ ಕಂಡು ಬಂದಿದೆ. ಈ ಬೃಹತ್ ಜಲಾಶಯವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಭೂಗತ ನೀರಿನ ಮೂಲದ ಗಾತ್ರ, ಭೂಮಿಯ ಮೇಲಿರುವ ಎಲ್ಲ ಸಾಗರಗಳ ಒಟ್ಟು ಗಾತ್ರಕ್ಕಿಂತ ಮೂರು ಪಟ್ಟು ಹೆಚ್ಚಿದೆ ಎಂದು ಕೂಡ ಅಂದಾಜಿಸಲಾಗಿದೆ.
ಇಲಿನಾಯ್ಸ್ ನ ಇವಾನ್ ಸ್ಟನ್ ನಲ್ಲಿರುವ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಸಂಶೋಧನೆ ಮಾಡಿದ್ದಾರೆ. ಈ ಸುಪ್ತ ಜಲಾಶಯವು ಭೂಮಿಯ ಮೇಲ್ಮೈಯಿಂದ ಸುಮಾರು 700 ಕಿ.ಮೀಟರ್ ಕೆಳಗೆ ಇದೆ. ಭೂಮಿಯ ನೀರಿನ ಮೂಲವನ್ನು ಸಂಶೋಧನೆ ಮಾಡುವಾಗ ಇದು ಕಂಡು ಬಂದಿದೆ. ರಿಂಗ್ ವುಡೈಟ್ ಎಂಬ ಖನಿಜದೊಳಗೆ ಈ ಗುಪ್ತ ಸಾಗರ ಅಡಗಿದೆ ಎಂದು ಸಂಶೋಧಕರು ಸಂಶೋಧಿಸಿದ್ದಾರೆ.
ಕೆಲವು ವಿಜ್ಞಾನಿಗಳು ಧೂಮಕೇತುವಿನ ಪ್ರಭಾವದಿಂದ ನೀರು ಹುಟ್ಟಿಕೊಂಡಿರಬಹುದು ಎಂದು ನಂಬಿದ್ದರು. ಈ ಸಂಶೋಧನೆಯು, ಭೂಮಿಯ ಸಾಗರಗಳು ಗ್ರಹದ ಆಳದಿಂದ ಹೊರಹೊಮ್ಮಿರಬಹುದು ಎಂಬ ಸುಳಿವು ನೀಡುತ್ತವೆ. ಮೇಲ್ಮೈ ಸಾಗರಗಳು ಕ್ರಮೇಣ ಅದರ ಮಧ್ಯಭಾಗದಿಂದ ಹೊರಬಂದಿರಬಹುದು ಎಂದು ತಜ್ಞರು ಊಹಿಸಿದ್ದಾರೆ. ಸಂಶೋಧನೆಯ ನೇತೃತ್ವ ವಹಿಸಿದ್ದ ಇಲಿನಾಯ್ಸ್‌ನ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ವಿಜ್ಞಾನಿ ಸ್ಟೀವನ್ ಜಾಕೋಬ್ ಸೆನ್ ಸಂದರ್ಶನವೊಂದರಲ್ಲಿ, ಭೂಮಿಯ ನೀರು ಗ್ರಹದ ಒಳಗಿನಿಂದ ಬಂದಿದೆ ಎಂಬುದಕ್ಕೆ ಇದು ಬಲವಾದ ಪುರಾವೆ ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಇರಿಸಲಾಗಿರುವ 2 ಸಾವಿರ ಸೀಸ್ಮೋಗ್ರಾಫ್ ಗಳನ್ನು ಬಳಸಿಕೊಂಡು ಸಂಶೋಧಕರು ಈ ಸಂಗತಿ ಕಂಡು ಹಿಡಿದಿದ್ದಾರೆ. 500 ಭೂಕಂಪನಗಳ ಅಲೆಗಳನ್ನು ಅಳೆಯಲಾಗಿದೆ. ಈ ಅಲೆಗಳು ಭೂಮಿಯ ಒಳಭಾಗದ ಮೂಲಕ ಚಲಿಸಿದಾಗ ಅವು ನಿಧಾನಗೊಂಡವು. ಕೆಳಗಿನ ಬಂಡೆಗಳಲ್ಲಿ ನೀರಿದೆ ಎಂದು ಇದು ತೋರಿಸಿದೆ. ನೀರು ಭೂಮಿಯ ಗರ್ಭದಲ್ಲಿರಬಹುದು ಮತ್ತು ಕಲ್ಲಿನ ಮೂಲಕ ಮೂಲಕ ಚಲಿಸಬಹುದು ಎಂಬ ಪರಿಕಲ್ಪನೆ ಮೂಡಿದೆ. ಒಂದು ವೇಳೆ ಇಲ್ಲಿದ್ದ ನೀರು ಸೇರಿದಂತೆ ಭೂಮಿಯ ಮೇಲಿನ ಎಲ್ಲ ನೀರು ಭೂಮಿಯ ಮೇಲ್ಮೈಯಲ್ಲಿಯೇ ಇದ್ದರೆ, ಪರ್ವತ ಶಿಖರಗಳು ಮಾತ್ರ ನೀರಿನಿಂದ ಹೊರಗಿರುತ್ತಿದ್ದವು ಎಂದು ತಜ್ಞರು ಅಂದಾಜಿಸಿದ್ದಾರೆ. ಆಯ್ತು ಬಿಡಿ… ಭೂಮಿಯ ಮೇಲಿನ ನೀರೇ ಮನುಷ್ಯ ಪ್ರಾಣಿಗೆ ಸಾಲುತ್ತಿಲ್ಲ. ಇನ್ನೂ ಮುಂದೆ ಆ ಜಲಮೂಲಕ್ಕೂ ಕೈ ಹಾಕಿ ಹೆಕ್ಕಿ ಹೆಕ್ಕಿ ತೆಗೆಯುವುದನ್ನೂ ಮನುಷ್ಯ ಬಿಡುವುದಿಲ್ಲ ಅನಿಸುತ್ತಿದೆ….