ಸಖತ್ ಕ್ರೇಜ್ ಹುಟ್ಟಿಕೊಂಡಿದೆ. ಮೊದಲ ಚಿತ್ರದಲ್ಲೇ ಎಲ್ಲರ ದೃಷ್ಟಿ ಇವನತ್ತಲೇ ಹಾಯ್ದುಕೊಂಡಿದೆ. ಹೌದು, ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೆಯ ಪುತ್ರ ‘ಯುವ ರಾಜ್ಕುಮಾರ್’ ನಟನೆಯ “ಯುವ” ಚಿತ್ರ ಸಖತ್ ಹವಾ ಸೃಷ್ಟಿಸಿಕೊಂಡಿದೆ. ವಿತರಕ ವಲಯದಲ್ಲಿ ಭರ್ಜರಿ ಡಿಮಾಂಡಿನ ಮೊತ್ತಕ್ಕೆ ಚಿತ್ರಮಂದಿರವರು ವ್ಯಾಪಾರಕ್ಕಿಳಿದಿದ್ದಾರೆ. ದೊಡ್ಮನೆಯ ಭರವಸೆಯ ಹುಡುಗನ ಎಂಟ್ರಿಗೆ ಚಿತ್ರಮಂದಿರಗಳು ಕಟೌಟು, ಅಲಂಕಾರಗಳೊಂದಿಗೆ ಸಿಂಗಾರಗೊಂಡಿವೆ. ಅಸಲಿಗೆ ಈ ಹವಾದಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಪಾತ್ರ ಬಹುದೊಡ್ಡದಿದೆ.
ಕನ್ನಡ ಚಿತ್ರರಂಗದ ಮಟ್ಟಿಗೆ ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದ ಚಿತ್ರಗಳನ್ನೇ ಕೊಡುತ್ತಾ, ಚಿತ್ರಮಂದಿರಕ್ಕೆ ಫ್ಯಾಮಿಲಿ ಆಡಿಯನ್ಸ್ ಬರುವಂತೆ ಮಾಡುತ್ತಿದ್ದ ನಟರಲ್ಲಿ ನಟ ‘ಪುನೀತ್ ರಾಜ್ಕುಮಾರ್’ ಪ್ರಮುಖರು. ಅವರ ಚಿತ್ರಕ್ಕೆ ಬರುವ ಕುಟುಂಬಸ್ಥರು ಬೇರಿನ್ನಾವ ನಟರ ಚಿತ್ರಕ್ಕೂ ಆ ಪಾಟಿ ನುಗ್ಗಿ ಬರುವುದಿಲ್ಲ. ಅಸಲಿಗೆ ಪುನೀತ್ ಕೊಡುತ್ತಿದ್ದ ಚಿತ್ರವೇ ಅಂಥದ್ದು. ಇಂಥಹ ಪುನೀತ್ ದೈವಾಧೀನರಾದ ನಂತರದಲ್ಲಿ ಅಭಿಮಾನಿಗಳಿಗೆ ಆ ಸ್ಥಾನದಲ್ಲಿ ಕಾಣಿಸಿದ ಆಶಾ ಕಿರಣವೇ ಈ ಯುವ ರಾಜ್ಕುಮಾರ್. ಅದೇ ನಿಟ್ಟಲ್ಲೇ ನಿರ್ದೇಶಕ ಸಂತೋಷ್ ಆನಂದರಾಮ್ “ಪುನೀತ್ ರಾಜ್ಕುಮಾರ್ ಆರಿಸಿಕೊಳೊಳ್ಳುತ್ತಿದ್ದ ಬೇಸಿನ ಸಿನಿಮಾ”ವನ್ನೇ ಕಟ್ಟಿಕೊಟ್ಟಂತಿದೆ. ಇತ್ತೀಚೆಗೆ ಬಿಡುಗಡೆಗೊಳಿಸಿದ ಟ್ರೈಲರ್ ಕೂಡ ಅದನ್ನೇ ಹೇಳುತ್ತಿದೆ; ಇದೊಂದು ಪವರ್ ಫುಲ್ ಫ್ಯಾಮಿಲಿ ಪ್ಯಾಕೇಜ್.
ಅದೇ ಸದ್ದಿನೊಂದಿಗೆ ನಾಳೆ ಬಿಡುಗಡೆ ಕಾಣುತ್ತಿರುವ ‘ಯುವ’ ಚಿತ್ರದ ಮೇಲೆ ದೊಡ್ಮನೆ ಅಭಿಮಾನಿಗಳು, ಅದರಲ್ಲೂ ವಿಶೇಷವಾಗಿ ಪುನೀತ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಹಾಗೆಯೇ, ರಾಜ್ಯಾಧ್ಯಂತ ಚಿತ್ರ ಬಿಡುಗಡೆಗೂ ಮೊದಲೇ ವ್ಯಾಪಾರದಲ್ಲಿ ಸಖತ್ ಹೈಪ್ ಪಡೆದುಕೊಂಡಿದೆ. ಎದುರಾಳಿ ಗಟ್ಟಿ ಚಿತ್ರಗಳಿಲ್ಲದೇ ‘ಯುವ ಹವಾ’ ಮಾಡತೊಡಗಿದ್ದಾನೆ. ಭರ್ಜರಿ ಹಿಟ್ ಚಿತ್ರಗಳನ್ನೇ ಕೊಡುತ್ತಾ ಬಂದಿರುವ ‘ಹೊಂಬಾಳೆ’ ಯವರು ಹಣ ಹೂಡಿದ ಚಿತ್ರವಾದ್ದರಿಂದ ಅದ್ಧೂರಿಯಾಗೇ ಚಿತ್ರ ಮೂಡಿ ಬರಲಿದೆ. ಸಂತೋಷ್ ಆನಂದರಾಮ್ ಮೇಲೊಂದು ಭರವಸೆಯಂತೂ ಇದ್ದೇ ಇದೆ. ಗಜ್ಜೆ ಸದ್ದಿಗೆ ಕಾಂತಾರದ ಕನ್ಯೆ ಸಪ್ತಮಿಗೌಡ ಇದ್ದಾರೆ. ಸುದಾರಾಣಿ, ಅಚ್ಯುತ್ ಕುಮಾರ್, ಗಿರಿರಾಜ್, ಕಿಶೋರ್, ಪ್ರಕಾಶ್ ರಾಜ್ ಸೇರಿದಂತೆ ಚಿತ್ರದಲ್ಲಿ ಅನುಭವಿ ತಾರಾ ಬಳಗವಿದೆ. ನಿರೀಕ್ಷೆಯಂತೆಯೇ ಚಿತ್ರ ಮೂಡಿ ಬಂದಿದ್ದರೆ, ಮತ್ತೊಬ್ಬ ‘ರಾಜ್ ಕುಡಿ’ ಕಣ್ಣು ಬಿಟ್ಟಾನು. ಯಾವುದಕ್ಕೂ ಪಲಿತಾಂಶ ನಾಳೆ ಸಿಗಲಿದೆ. ಕಾದು ನೋಡಿರಿ
