ಹಾವೇರಿ: ರಾಜ್ಯಕ್ಕೆ ಬರ ಆವರಿಸಿದೆ. ಆದರೂ ರೈತರು ಮೆಣಸಿಕಾಯಿ ಬೆಳೆ ಬೆಳೆದಿದ್ದಾರೆ. ಆದರೆ ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿಯ ಬೆಲೆ ದಿಢೀರ್ ಕುಸಿದಿದೆ. ಹೀಗಾಗಿ ರೊಚ್ಚಿಗೆದ್ದ ರೈತರು ಅಗ್ನಿಶಾಮಕ ವಾಹನ ಸೇರಿ 12 ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅಲ್ಲದೇ, ಎಪಿಎಂಸಿ ಕಚೇರಿಗೆ ಕಲ್ಲು ತೂರಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು 25ಕ್ಕೂ ಅಧಿಕ ರೈತರನ್ನು ವಶಕ್ಕೆ ಪಡೆದಿದ್ದಾರೆ. ಆಕ್ರೋಶಗೊಂಡ ರೈತರು ಅಧಿಕಾರಿಗಳಿಗೆ ಖಾರ ಅರೆದಿದ್ದಾರೆ. ಕಳೆದ ವಾರ ಒಂದು ಕ್ವಿಂಟಾಲ್ ಮೆಣಸಿನಕಾಯಿ 20 ಸಾವಿರಕ್ಕೆ ಮಾರಾಟವಾಗಿತ್ತು. ತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 5 ಲಕ್ಷ ಕ್ವಿಂಟಾಲ್ ಮೆಣಸಿನಕಾಯಿ ಮಾರುಕಟ್ಟೆಯೊಳಗೆ ಬಂದಿತ್ತು.
ಕಳೆದ ವಾರ 20 ಸಾವಿರ ರೂ. ಇದ್ದ ದರ, ಸೋಮವಾರ ದಿಢೀರನೆ 12 ಸಾವಿರಕ್ಕೆ ಕುಸಿದಿದೆ. ಹೀಗಾಗಿ ಬ್ಯಾಡಗಿ ಎಪಿಎಂಸಿ ಕಚೇರಿ ಮೇಲೂ ಕಲ್ಲು ತೂರಿ ಗ್ಲಾಸ್‌ಗಳನ್ನು ಪೀಸ್ ಪೀಸ್ ಮಾಡಿದರು. ನಂತರ ಕಚೇರಿಯೊಳಗೆ ನುಗ್ಗಿ ದಾಖಲೆಗಳನ್ನು ನಾಶ ಮಾಡಿದರು. ಪೊಲೀಸ್ ಹಾಗೂ ಅಗ್ನಿಶಾಮಕ ವಾಹನಕ್ಕೆ ಬೆಂಕಿ ಹಚ್ಚಿದರು. ಅನ್ನದಾತರ ಕೋಪಾಗ್ನಿಯಲ್ಲಿ 12 ವಾಹನಗಳು ಜಖಂ ಆಗಿವೆ. ಮೂರ್ನಾಲ್ಕು ವಾಹನಗಳು ಭಸ್ಮ ಆಗಿವೆ.
ಗಲಾಟೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಆಗಮಿಸಿದ್ದಾರೆ. ಆಗ ರೈತರೇ ಪೊಲೀಸರನ್ನು ಕೈಯಲ್ಲಿ ಬಡಿಗೆ ಹಿಡಿದು ಓಡಿಸಿದ್ದಾರೆ. ಮೆಣಸಿನಕಾಯಿ ಗೋಡೌನ್‌ಗೂ ಬೆಂಕಿ ಹೊತ್ತಿಕೊಂಡಿದ್ದು, ಘಾಟು ಹೆಚ್ಚಾಗುತ್ತಿದ್ದಂತೆ ಅಲ್ಲಿದ್ದ ಜನರು ಉಸಿರಾಡಲು ಪರದಾಡಿದ್ದಾರೆ. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.