ಮಂಗಳೂರು: ಬ್ಯಾಂಕ್ ಗೆ ಕನ್ನ ಹಾಕಿದ್ದ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಟ್ವಾಳದ ಮಹಮ್ಮದ್ ರಫೀಕ್ ( 35 ), ಮಂಜೇಶ್ವರದ ಇಬ್ರಾಹಿಂ ಕಲಂದರ್ (41) ಹಾಗೂ ಮಂಜೇಶ್ವರದ ದಯಾನಂದ ಎಸ್ (37) ಬಂಧಿತ ಆರೋಪಿಗಳು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಹತ್ತಿರದ ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ನಲ್ಲಿ ಕಳ್ಳತನವಾಗಿತ್ತು. ಖದೀಮರು ಕೋಟ್ಯಂತರ ರೂ. ನಗದು ಹಾಗೂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು.
ತನಿಖೆ ಕೈಗೊಂಡಿದ್ದ ಪುತ್ತೂರು ಉಪವಿಭಾಗದ ಪೊಲೀಸರ ತಂಡ ಮೂವರು ಆರೋಪಿಗಳನ್ನು ಬಂಧಿಸಿದೆ. ಘಟನೆ ನಡೆದು ಒಂದು ತಿಂಗಳ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬ್ಯಾಂಕ್ ಹಳೆಯ ಕಟ್ಟಡದಲ್ಲಿ ಶಾಖೆ ನಡೆಸುತ್ತಿತ್ತು. ಸುತ್ತಲೂ ಪೊದೆ ಇರುವ ಹಿನ್ನೆಲೆಯಲ್ಲಿ ಕಿಟಕಿ ಮುರಿದು ಒಳನುಗ್ಗಿ ಆರೋಪಿಗಳು ದೋಚಿದ್ದರು.