ಐಪಿಎಲ್ ನ 3ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ರೋಚಕ ಜಯಸಾಧಿಸಿದೆ. ಸನ್ ರೈಸರ್ಸ್ ಹೈದರಾಬಾದ್ ರೋಚಕ ಸೋಲು ಕಂಡಿದೆ.
ಕೆಕೆಆರ್ ಪರ ಆ್ಯಂಡ್ರೆ ರಸೆಲ್ ಅಬ್ಬರಿಸಿದರೆ, ಎಸ್ ಆರ್ ಹೆಚ್ ಪರ ಹೆನ್ರಿಕ್ ಕ್ಲಾಸೆನ್ ಅಬ್ಬರಿಸಿದ್ದಾರೆ. ಆ್ಯಂಡ್ರೆ ರಸೆಲ್ 25 ಎಸೆತಗಳಲ್ಲಿ 3 ಫೋರ್ ಹಾಗೂ 7 ಸಿಕ್ಸ್ನೊಂದಿಗೆ ಅಜೇಯ 64 ರನ್ ಗಳಿಸಿದ್ದರು. ಪರಿಣಾಮ ಕೆಕೆಆರ್ 20 ಓವರ್ಗಳಲ್ಲಿ 208 ರನ್ ಗಳಿಸುವಂತಾಗಿತ್ತು. ಈ ಗುರಿ ಬೆನ್ನಟ್ಟಿದ ಎಸ್ ಆರ್ ಹೆಚ್ ಪರ ಹೆನ್ರಿಕ್ ಕ್ಲಾಸೆನ್ 29 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ಗಳೊಂದಿಗೆ 63 ರನ್ ಗಳಿಸಿದ್ದರು. ಒಂದೇ ಒಂದು ಬೌಂಡರಿ ಅವರು ಸಿಡಿಲಿಲ್. ಇದೇ ಈಗ ಇತಿಹಾಸ ಬರೆದಂತಾಗಿದೆ. ಒಂದೇ ಒಂದು ಫೋರ್ ಬಾರಿಸದೇ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಹೆನ್ರಿಕ್ ಕ್ಲಾಸೆನ್ ಹೆಸರಿಗೆ ಬಂದಿದೆ.
ಇದಕ್ಕೂ ಮುನ್ನ ನಿತೀಶ್ ರಾಣಾ ಪರ ಈ ದಾಖಲೆ ಇತ್ತು. 2017 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ರಾಣಾ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ಫೋರ್ ಬಾರಿಸದೇ 7 ಸಿಕ್ಸ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಸದ್ಯ ಈ ದಾಖಲೆಯನ್ನು ಕ್ಲಾಸೆನ್ ಮುಡಿಗೇರಿಸಿಕೊಂಡಿದ್ದಾರೆ. ಹೆನ್ರಿಕ್ ಕ್ಲಾಸೆನ್ ವಿರೋಚಿತ ಹೋರಾಟದ ನಂತರವೂ ಕೆಕೆಆರ್ ರೋಚಕ ಗೆಲುವು ಸಾಧಿಸುವಂತಾಯಿತು.