ಅಪ್ಪು ಆಗಿನ್ನೂ ಪುನೀತ್ ಆಗಿರಲಿಲ್ಲ. ಬಾಲ ನಟ ಲೋಹಿತ್ ಎಂದೇ ಕರೆಸಿಕೊಳ್ತಾ ಇದ್ರು. ಮುದ್ದು ಮುಖದ ಆ ಬಾಲಕನ ಅಭಿನಯಕ್ಕೆ ಮಾರು ಹೋಗಿತ್ತು ಕರುನಾಡು. ಬೆಟ್ಟದ ಹೂವು ಚಿತ್ರದ ಅಭಿನಯಕ್ಕೆ ಮಾಸ್ಟರ್ ಲೋಹಿತ್ ಅಂದು ರಾಷ್ಟ್ರ ಪಶಸ್ತಿ ಮುಡಿಗೇರಿಸಿದ್ದರು.
ಬೆಟ್ಟದ ಹೂವು ಚಿತ್ರ ಅಪ್ಪುವಿನ ಮನಸ್ಸಲ್ಲಿ ಎಷ್ಟು ಗಟ್ಟಿಯಾಗಿ ಬೇರೂರಿತ್ತು ಅಂದ್ರೆ.. ಅವರು ಗಂಧದ ಗುಡಿಯ ಸೂಪರ್ ಸ್ಟಾರ್ ಆದ್ರೂ, ಆ ಬೆಟ್ಟದ ಹೂವಿನ ಗುಂಗಿಂದ ಹೊರಕ್ಕೆ ಬಂದಿರಲಿಲ್ಲ.
ಮುಳ್ಳಯ್ಯನಗಿರಿ ತಪ್ಪಲಲ್ಲಿರುವ ಸಮೃದ್ಧ ಕಾಡು. ಕಾಡಿನ ಮಧ್ಯದ ಶೂಟಿಂಗ್ ಸೆಟ್. ಅಲ್ಲಿ ಚಿತ್ರೀಕರಣ ಮಾಡಿದ ಆ ದಿನಗಳು.. ಅಲ್ಲಿನ ಅತ್ತಿಗುಂಡಿ ಗ್ರಾಮಸ್ಥರ ಜೊತೆ ಕಳೆದ ಕ್ಷಣಗಳು.. ಅಬ್ಬಬ್ಬಾ ಎಷ್ಟೊಂದು ನೆನಪುಗಳು.. ಯಾವುದೇ ಚಿತ್ರದ ಚಿತ್ರೀಕರಣಕ್ಕೆ ಕಾಡಿಗೆ ಹೋದಾಗಲೆಲ್ಲಾ ಅಪ್ಪುವನ್ನು ಕಾಡುತ್ತಿದ್ದದ್ದು ಇವೇ ನೆನಪುಗಳು. ಆಪ್ತರ ಬಳಿ ಆಗಾಗ ಈ ಬಗ್ಗೆ ಹೇಳಿಕೊಳ್ಳುತ್ತಿದ್ದರು ಅಪ್ಪು.
ಚಿತ್ರದ ಪಾತ್ರಧಾರಿ ರಾಮು ಓದ್ತಾ ಇದ್ದ ಶಾಲೆ, ‘ತಾಯಿ ಶಾರದೆ, ಲೋಕ ಪೂಜಿತೆ, ಜ್ಞಾನದಾತು ನಮೋಸ್ತುತೆ’ ಎಂದು ಪ್ರಾರ್ಥಿಸಿದ ಜಾಗ… ಶೆರ್ಲಿ ಮೇಡಂಗಾಗಿ ಬೆಟ್ಟಕ್ಕೆ ಹೋಗಿ ತರುತ್ತಿದ್ದ ಹೂವಿನ ಬೆಟ್ಟ, ಹಣ ಕೂಡಿಟ್ಟು ರಾಮಾಯಣ ಪುಸ್ತಕ ಖರೀದಿಸಲು ಹೋಗಿ ಬರುತ್ತಿದ್ದ ಅಂಗಡಿ. ಹೀಗೆ ಎಲ್ಲವನ್ನೂ ಪುನೀತ್ ಸದಾ ಮೆಲುಕು ಹಾಕ್ತಾನೇ ಇದ್ರು.
ಅವುಗಳನ್ನು ಅಪ್ಪು ಹೆಚ್ಚು ದಿನ ಅದುಮಿಟ್ಟುಕೊಳ್ಳಲಾಗಲಿಲ್ಲ. ಕೊನೆಗೆ ಅತ್ತಿಗುಂಡಿ ಗ್ರಾಮಕ್ಕೆ ಏಕಾಂಗಿಯಾಗಿ ಹೊರಟೇ ಬಿಟ್ರು. ಆ ಸ್ಥಳ ತಲುಪಿದ್ದೇ ತಡ, ಆ ಗ್ರಾಮದ ರಸ್ತೆ ರಸ್ತೆಯೂ ಅವರನ್ನೇ ಬರಮಾಡಿಕೊಳ್ಳುತ್ತಿವೆಯೇನೋ ಎಂಬಂತೆ ಅವರು ಸಂಭ್ರಮಿಸಿದ್ರು. ತಮ್ಮ ಸಂಭ್ರಮವನ್ನು ಪೇಸ್ ಬುಕ್ಕಿಗೆ ಪೋಸ್ಟ್ ಮಾಡಿ, ತಮ್ಮ ಸಂತಸವನ್ನು ಅಂದು ಅಭಿಮಾನಿಗಳೊಂದಿಗೂ ಹಂಚಿಕೊಂಡಿದ್ದರು ಪುನೀತ್ ರಾಜ್ ಕುಮಾರ್.
ಏನೇ ಇರಲಿ. ಅಪ್ಪುವಿಗೆ ಬೆಟ್ಟದ ಹೂವು ಕಾಡುತ್ತಿತ್ತು; ಇಂದು ಅವರೇ ಇಲ್ಲದಾಗಿ, ಅವರ ನೆನಪುಗಳು ನಮ್ಮನ್ನು ಬಿಟ್ಟೂ-ಬಿಡದೆ ಕಾಡುತ್ತಿವೆ.