ಕಲಬುರಗಿ: ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಮಗ ಬಿ.ವೈ ವಿಜಯೇಂದ್ರ ಅವರ ದಂಧೆಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಹಾಲಿ ಮೂವರು ಸಂಸದರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ತಂದೆ – ಮಗ ಇಬ್ಬರೂ ಸೇರಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿರುವ ಗುರಿ ಹೊಂದಿದ್ದಾರೆ. ನನ್ನ ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದ ಎಂದು ಕಿಡಿಕಾರಿದ್ದಾರೆ.
ಯಡಿಯೂರಪ್ಪ ಕುಟುಂಬದಲ್ಲಿ ಮಗ ಕ್ಯಾಬಿನೆಟ್ ಮಂತ್ರಿಯಾಗಬೇಕು. ಇನ್ನೊಬ್ಬ ಮಗ ಮುಖ್ಯಮಂತ್ರಿಯಾಗಬೇಕು. ಇನ್ನೂ ಅವರ ಮನೆಯ ಕೆಲವು ಚಿಳ್ಳಿ ಮಿಳ್ಳಿ ಸದಸ್ಯರು ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಸದಸ್ಯರಾಗಬೇಕು ಎಂಬುವುದು ಅವರ ಕನಸು ಎಂದು ವ್ಯಂಗ್ಯವಾಡಿದ್ದಾರೆ.
ಯಡಿಯೂರಪ್ಪ ಲಿಂಗಾಯತನೇ ಅಲ್ಲ. ಅವರ ಹಿಂದೆ ಕೆಲವು ಸ್ವಾಮೀಜಿಗಳಿದ್ದಾರೆ. ಹಣ ಕೊಡ್ತಾನೆ ಅಂತ ಸ್ವಾಮೀಜಿಗಳು ಅವರಿಗೆ ತಥಾಸ್ತು ಅಂತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.