ಪೂನಂ ಪಾಂಡೆ! ಅಸಲಿಗೆ ಈಕೆ ಮೊದಲಿಂದಲೂ ಪ್ರಚಾರಪ್ರಿಯೆ. ಪ್ರಚಾರಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆದಾಕೆ!. ನಗ್ನ,ಭಗ್ನ ಈಕೆಗೆ ಹೊಸತೇನಲ್ಲ. ಬೋಲ್ಡ್ ಅಂಡ್ ಬ್ಯೂಟಿಫುಲ್ ಎನಿಸಿಕೊಳ್ಳುವ ಭರದಲ್ಲಿ ಆಗಾಗ ಈಕೆ ಮೈದಾನಕ್ಕಿಳಿದು ಆಟವಾಡುತ್ತಲೇ ಇರುತ್ತಾಳೆ. ಅದೇ ತೆರನಲ್ಲಿ ಈಗ ಹೊಸ ನಾಟಕ ಶುರುವಿಟ್ಟುಕೊಂಡು, ಸಖತ್ ವೈರಲ್ ಆಗಿ ಹೋಗಿದ್ದಾಳೆ. ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲಿ ತಾರಾಮಾರ ಬೈದಾಡಿಸಿಕೊಂಡಿದ್ದಾಳೆ.
ವಿಷಯವಿಷ್ಟೆ, ಮೊನ್ನೆ ದಿನ (ಪೆಬ್ರವರಿ ಎರಡು) ಆಕೆಯ ಮ್ಯಾನೇಜರ್ “ಪೂನಂ ಪಾಂಡೆ ಗರ್ಭಕೋಶ ಕ್ಯಾನ್ಸರಿನಿಂದಾಗಿ ತೀರಿಕೊಂಡರು” ಎಂಬಂತೆ ಪುಂಗುತ್ತಾ ಪೋಸ್ಟ್ ಮಾಡಿಕೊಂಡಿದ್ದ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಅಚ್ಚಾಗುತ್ತಿದ್ದಂತೆಯೇ ದೇಶಾದ್ಯಂತ ಸಖತ್ ವೈರಲ್ ರೂಪ ತಾಳಿಕೊಂಡಿತು. ಸಾವಿನ ಸುದ್ದಿಯಾದ್ದರಿಂದ, ವಿವಾದಿತ ನಟಿಯ ಬಗ್ಗೆಯೂ ಕೂಡ, ಒಂದಷ್ಟು ಸಿಂಪತಿಯ ಚರ್ಚೆಗಳು ನಡೆದುಹೋದವು. ಸಾಗರೋಪಾದಿಯಲ್ಲಿ ಕಾಮೆಂಟುಗಳು ಹರಿದಾಡಿದ್ದವು.
ಇದೀಗ ಸ್ವತ: ಪೂನಂ ಪಾಂಡೆ ತಾನು ಬದುಕಿದ್ದಾಗಿ ತಿಳಿಸಿ, ಕ್ಯಾನ್ಸರ್ ಅರಿವಿಗಾಗಿ ಈ ರೀತಿ ಮಾಡಿರುವುದಾಗಿ ಇನ್ಸ್ಟಾಗ್ರಾಂ ಫೋಸ್ಟ್ ಮಾಡಿಕೊಂಡಿದ್ದಾಳೆ.
ಒಟ್ಟಿನಲ್ಲಿ ಈ ಬಿಚ್ಚ ನಟಿಯ ಹುಚ್ಚಾಟಕ್ಕೆ ಸೋಶಿಯಲ್ ಮೀಡಿಯಾ ಮಂದಿ ಕೊಂಚ ಕನಲಿದ್ದಂತೂ ಸತ್ಯ! ಮಾಡೆಲ್ ಕಂ ನಟಿಯಾಗಿ ಗುರುತಿಸಿಕೊಂಡಿದ್ದ ಪೂನಂ ಪಾಂಡೆ ವಿವಾದಗಳಿಂದಲೇ ಹೆಸರು(?) ಮಾಡಿದ್ದಾಕೆ. ಆಗೊಮ್ಮೆ ಭಾರತ ವಿಶ್ವಕಪ್ ಗೆದ್ದರೆ ನಗ್ನಳಾಗುವುದಾಗಿ ಸವಾಲಿನ ಆಫರ್ ಕೊಟ್ಟಿದ್ದಳು. ಅದೃಷ್ಟಕ್ಕೆ ಅವತ್ತಿಗೆ ಧೋನಿ ತಂಡ ವಿಶ್ವಕಪ್ ಸೋತು ಪೂನಂ ಪಾಂಡೆಯ “ಟೂ ಪೀಸ್” ಆಕೆಯ ಮೈಮೇಲೆಯೇ ಉಳಿದುಕೊಂಡಿತ್ತು. ಅರೆ-ಬರೆ ಮೈತೋರಿಸುತ್ತಾ ವಿವಾದಗಳ ಮೇಲೆ ವಿವಾದ ಎಬ್ಬಿಸುತ್ತಾ, ಹುಚ್ಚಾಟಗಳಲ್ಲೇ ಹೆಚ್ಚು ಕಾಲ ಕಳೆವ ಈ ಬಿಚ್ಚು ನಟಿ ತನ್ನ ಸಾವಿಗೆ ಜನ ಸ್ಪಂದನೆ ಹೇಗಿರುತ್ತೆ ಎಂಬ ಕುತೂಹಲಕ್ಕೆ ಹೀಗೆ ಸಾವಿನ ನಾಟಕ ಮಾಡಿದಂತಿದೆ. ಹೆಸರಿಗೆ ಗರ್ಭಕೋಶದ ಕ್ಯಾನ್ಸರಿನಂತ ಮಾರಕ ಖಾಯಿಲೆಯನ್ನ ಬಳಸಿಕೊಂಡಿದ್ದಾಳೆ. ಅಸಲಿಗೆ, ಇಂಥ ಹುಚ್ಚು-ಬಿಚ್ಚು ಆಟಗಾರರಿಂದಲೇ ಸೋಶಿಯಲ್ ಮೀಡಿಯಾ ಕಿಮ್ಮತ್ತು ಕಳೆದುಕೊಳ್ಳೋದು. ಅಂದಹಾಗೆ, ಒಂದು ಕಾಲಕ್ಕೆ ಬಟ್ಟೆಗೆ ಬೆಲೆ ಇಲ್ಲದ ಪಾರ್ನ್ ಸಿನಿಮಾಗಳಲ್ಲಿ ತೊಡಗಿಸಿಕೊಂಡು ಹದಗೆಟ್ಟು ಹೋಗಿದ್ದ ‘ಸನ್ನೀ ಲಿಯೋನ್’ ಎಂಬ ಪೊರ್ನ್ ನಟಿ, ಅನಾಥ ಮಕ್ಕಳನ್ನು ದತ್ತು ಪಡೆದು ಸಾಕೋದರ ಜೊತೆಗೆ, ಆಕೆ ಸಮಾಜದಲ್ಲಿ ತನ್ನ ಪರಿವರ್ತನೆ ಬಯಸಿ, ಸಮಾಜ ಸೇವೆಯಲ್ಲಿ ತನ್ನನ್ನು ವಿಶೇಷ ಕಾರ್ಯಗಳ ಮೂಲಕ ತೊಡಗಿಸಿಕೊಂಡು, ಕಂಡವರ ಕಣ್ಣಲ್ಲಿ ಒಂದಷ್ಟು ಸಹಾನುಭೂತಿ ಪಡೆಯುತ್ತಿದ್ದಾಳೆ. ನಿಜಕ್ಕೂ ಆಕೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಹಾಗೆಯೇ, ಈ ಸನ್ನೀಲಿಯೋನ್ ಬದಲಾದಂತೆ ಆದಷ್ಟು ಬೇಗ ಪೂನಂ ಪಾಂಡೆಗೂ ಆ ಭಗವಂತ ಬುದ್ದಿ ಬದಲಿಸಲಿ. ಆಕೆಯ ಬದುಕು ಕೂಡ ಬದಲಾಗಲಿ