ಥಿಯೇಟರಿಗೆ ಪ್ರೇಕ್ಷಕ ಬರುತ್ತಿಲ್ಲ ಎನ್ನುವ ಹೊತ್ತಲ್ಲಿ, ನುಗ್ಗಿ ಬಂದು ಥಿಯೇಟರ್ ತುಂಬಿಸಿಕೊಂಡ ಚಿತ್ರ “ಕಾಟೇರ”. ಅಭಿಮಾನಿಗಳಿಗೆ ರಸದೂಟದಂತಿದ್ದ ಸಿನಿಮಾದಲ್ಲಿ, ಭರ್ಜರಿ ಫೈಟುಗಳು, ಸಖತ್ ಸಾಂಗುಗಳು, ಹದವರಿತ ಸಂಭಾಷಣೆಯ ಜೊತೆಗೆ ರೈತರ ಸಾವು-ನೋವಿನ ಗಟ್ಟಿ ಕಥೆಯು, ಮನ ಮುಟ್ಟಿದ ಕಾರಣಕ್ಕೆ ಪ್ರೇಕ್ಷಕ ಮತ್ತೆ-ಮತ್ತೆ ಥಿಯೇಟರ್ ಕಡೆ ವಾಲಿಕೊಂಡ! ಪರಿಣಾಮವಾಗಿ ಕಾಟೇರ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆದ! ಹಾಗೆ ಚಿತ್ರ ತೆರೆ ಕಂಡಲ್ಲೆಲ್ಲಾ ಭರ್ಜರಿ ಗಳಿಕೆ ಕಂಡಿದ್ದರಿಂದ, ಸೋತು ಬಸವಳಿದ ಚಿತ್ರೋದ್ಯಮಕ್ಕೆ ಜೀವಜಲ ಸಿಕ್ಕಂತಾಗಿತ್ತು! ಅಲ್ಲಿಗೆ “ದರ್ಶನ್ ಸಿನಿಮಾ ಬಂದರೆ ಥಿಯೇಟರ್ ಗೆ ಜೀವ ಬಂದಂಗೆ” ಎನ್ನುವುದು ಮತ್ತೆ ಪ್ರೂ ಮಾಡಿಬಿಟ್ಟ ಕಾಟೇರ. ಚಿತ್ರ ನೂರು ದಿನ ಪೂರೈಸಿ ಮುನ್ನುಗ್ಗಿತು.
ಹೌದು, ಕಾಟೇರ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ, ‘ರಾಕ್ ಲೈನ್ ಮಾಲ್’ ಅಲ್ಲಿ ಪ್ರೆಸ್ ಮೀಟ್ ಕರೆದು ಸಂಭ್ರಮ ಹಂಚಿದ ಚಿತ್ರತಂಡ, ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ನೆನೆದು ನಮನ ಸಲ್ಲಿಸಿತು. ನಾಯಕ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್, ಸಂಭಾಷಣೆಕಾರ ಮಾಸ್ತಿ, ಕಥೆಗಾರ ಜಡೇಶ್ ಹಂಪಿ, ನಟ ಸೂರಜ್ ಪತ್ರಿಕಾಗೋಸಷ್ಟಿಯಲ್ಲಿ ಕೂತು ಮಾತಾಡಿದರು. ಇದೇ ಸಂದರ್ಭದಲ್ಲಿ ಮಾಸ್ತಿ, ಜಡೇಶ್, ಸೂರಜ್ ಅವರಿಗೆ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ವಿಶೇಷವಾಗಿ ಕಾರಗಳನ್ನು ಉಡುಗೊರೆಯಾಗಿ ನೀಡಿದ ವಿಚಾರ ಹೇಳಿ ಸಂಭ್ರಮಿಸಿದರು.
ನಿಜಕ್ಕೂ ಕಾಟೇರನಿಗೆ ಕಥೆ, ಚಿತ್ರಕತೆ, ಸಂಭಾಷಣೆಯೇ ಚಿತ್ರವನ್ನು ನೂರು ದಿನದತ್ತ ಕೊಂಡೊಯ್ಯುವಂಥ ಶಕ್ತಿ ತುಂಬಿದ್ದು. ಇದೀಗ ಆ ವಿಭಾಗದಲ್ಲಿ ಕೆಲಸ ಮಾಡಿದ ಮಾಸ್ತಿ ಮತ್ತು ಜಡೇಶ್ ಅವರಿಗೆ ಪ್ರೋತ್ಸಾಹಕರವಾಗಿ ಕಾರು ಕೊಟ್ಟಿದ್ದು, ಕಾಟೇರನ ಗೆಲವಿನ ಸಂಭ್ರಮಕ್ಕೆ ಮೆರಗು ಹೆಚ್ಚಿಸಿತು.
ಕಾಟೇರನ ಈ ಸಂಭ್ರಮದ ದಾರಿಯಲ್ಲಿ ನಿರ್ದೇಶಕ ತರುಣ್ ಮತ್ತವರ ತಂಡ ಶ್ರಮಿಸಿ, ಸೆವೆಸಿದ ಹಗಲು ರಾತ್ರಿಗಳು ಸಕ್ಸಸ್ ಖುಷಿಯಲ್ಲಿ ಕರಗಿಹೋದವು. ನಿರ್ಮಾಪಕರ ಅದ್ಧೂರಿತನ, ದೊಡ್ಡ ಕಲಾವಿದರ ದಂಡು, ದೊಡ್ಡ ತಂತ್ರಜ್ಞರ ತಂಡ ಒಂದೆಡೆ ಸೇರಿದ ಫಲವಾಗಿ ಚಿತ್ರ ಜನಮನ ತಟ್ಟಿತು.
ಚಿತ್ರಕ್ಕೆ ಕಳಶಪ್ರಾಯರಾದ “ಚಾಲೆಂಜಿಂಗ್ ಸ್ಟಾರ್ ದರ್ಶನ್” ಎಂಬ ಸಾರಥಿಯಿಂದ ಬಾಕ್ಸ್ ಆಫೀಸ್ ಜರ್ನಿ ಸಾಗಿದ್ದು, ಈ ವರ್ಷದ ಸೂಪರ್ ಹಿಟ್ ಸಿನಿಮಾ ಎಂಬ ಅಗ್ರ ಸ್ಥಾನ ಗಿಟ್ಟಿಸುವಂತಾಯ್ತು! ಅಸಲಿಗೆ, ಈ ಅಜಾನುಬಾಹು ದರ್ಶನ್, ಬಹು ದಿನಗಳ ನಂತರದಲ್ಲಿ ಕಾಟೇರನಾಗಿ ಪರಕಾಯ ಪ್ರವೇಶಿಸಿ, ಆಕ್ಷನ್, ಸೆಂಟಿಮೆಂಟ್, ಸೆಟಲ್ ಆಕ್ಟಿಂಗ್ ಮಾಡಿ, ಪಾತ್ರ ನುಂಗಿದ ಪರಿಗೆ ಥಿಯೇಟರ್ ತುಂಬಿಕೊಂಡವು. ಚಿತ್ರ ಶತದಿನೋತ್ಸವ ಆಚರಿಸಿ ಮುನ್ನುಗ್ಗಿತು. ಈ ಸಂಭ್ರಮದಲ್ಲಿ ಚಿತ್ರದ ಶಕ್ತಿಯಾದ ಬರಹಗಾರರಿಗೆ ಮನ್ನಣೆ ನೀಡಿ, ಕಾರು ಉಡುಗೊರೆಯಾಗಿ ನೀಡಲಾಗಿದೆ. ಇದಲ್ಲವೇ ಸಂಭ್ರಮ. ಜೈ ಕಾಟೇರ..