ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಆಡುಜೀವಿತಂ ಚಿತ್ರ ಗುರುವಾರ ತೆರೆಗೆ ಅಪ್ಪಳಿಸಿತ್ತು. ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಮೊದಲ ದಿನದ ಗಳಿಕೆಯೇ 16.07 ಕೋಟಿ ಎಂದು ಅಂದಾಜಿಸಲಾಗಿದೆ.
ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಅಮಲಾ ಪೌಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮಣಿರತ್ನಂ ಅವರು ಕೂಡ ಈ ಚಿತ್ರ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಪ್ರತಿಭಾನ್ವಿತ ಕಲಾವಿದ. ಅವರ ನಟನೆ ಆ ಪಾತ್ರದಲ್ಲಿಯೇ ಜೀವ ತಾಳಿದಂತೆ ಇರುತ್ತದೆ. ಇದಕ್ಕೆ ಈ ಚಿತ್ರವೇ ಉದಾಹರಣೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದ ಈ ಚಿತ್ರ, ಇಮಿಗ್ರಟ್ಸ್ ಸುತ್ತವೇ ಸಾಗುತ್ತದೆ. ಹೊಟ್ಟೆ ಪಾಡಿಗಾಗಿ ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆ ಈ ಚಿತ್ರದ ಹೂರಣವಾಗಿದೆ. ಆತನ ಪಾಸ್ಪೋರ್ಟ್ ಕಸಿದು ಆತನಿಗೆ ಕೊಡುವ ಹಿಂಸೆಗಳು ಆ ಬಿಸಿಲಿನ ಮರುಭೂಮಿಯಲ್ಲಿ ಆತ ಪಡುವ ಯಾತನೆ ಈ ಚಿತ್ರದಲ್ಲಿ ಸಾಗಿದೆ.
ಈ ಪಾತ್ರದಲ್ಲಿ ವಲಸಿಗ ವ್ಯಕ್ತಿಯಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್, ಹಲವಾರು ವರ್ಷಗಳಿಂದ ಈ ಚಿತ್ರಕ್ಕಾಗಿ ದುಡಿದಿದ್ದಾರೆ. `ಆಡುಜೀವಿತಂ’ 2008ರಲ್ಲಿ ಬೆನ್ಯಾಮಿನ್ ಬರೆದ ಅದೇ ಹೆಸರಿನ ಮಲಯಾಳಂ ಕಾದಂಬರಿ ಸಿನಿಮಾ ಇದು. ಪೃಥ್ವಿರಾಜ್ ಚಿತ್ರಕ್ಕಾಗಿ ಸಾಕಷ್ಟು ದೇಹ ದಂಡಿಸಿದ್ದಾರೆ. ಅವರು ಸಿನುಮಾಗಾಗಿ ಸುಮಾರು 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕಳೆದ ಚಿತ್ರ ಐದು ವರ್ಷಗಳಿಂದ ತಯಾರಾಗುತ್ತಿದೆ ಎಂಬುವುದು ವಿಶೇಷ. ಎ.ಆರ್.ರೆಹಮಾನ್ ಅವರ ಸಂಗೀತ, ಸುನಿಲ್ ಕೆ.ಎಸ್ ಅವರ ಕ್ಯಾಮೆರಾ ಕೈಚಳಕ, ರೆಸುಲ್ ಪೂಕುಟ್ಟಿ ಅವರ ಸೌಂಡ್ ಡಿಸೈನ್ ಮತ್ತು ಶ್ರೀಕರ್ ಪ್ರಸಾದ್ ಸಂಕಲನ ಈ ಚಿತ್ರಕ್ಕಿದೆ.


















