ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಶಂಕಿತನನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಆರೋಪಿಯನ್ನು ಬಂಧಿಸಿದೆ. ಮುಝಮ್ಮಿಲ್ ಶರೀಫ್(30) ಬಂಧಿತ ಶಂಕಿತ. ಮುಝಮ್ಮಿಲ್ ಶರೀಫ್ ಮನೆ ಮೇಲೆ ಎನ್ ಐಎ ದಾಳಿ ನಡೆಸಿ ವಶಕ್ಕೆ ಪಡೆದಿತ್ತು. ಇಂದು ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸಿದ ನಂತರ ಆತನನ್ನು ಬಂಧಿಸಲಾಗಿದೆ.
ಬಾಂಬ್ ಸ್ಫೋಟ ನಡೆದ ದಿನ ಆತ ಬೆಂಗಳೂರಿನಲ್ಲಿಯೇ ಇದ್ದು ಸ್ಫೋಟದ ಸಂಚುಕೋರ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಎಂಬ ಆರೋಪ ಈತನ ಮೇಲಿದೆ. ಇಲ್ಲಿಯವರೆಗೆ ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್ ಐಎ ತಂಡಗಳು ಭೇದಿಸಿದ ನಂತರ ದಾಳಿಯ ಸಂಚುಕೋರ ಮುಝಮ್ಮಿಲ್ ಶರೀಫ್ ನನ್ನು ವಶಕ್ಕೆ ಪಡೆಯಲಾಗಿದೆ. ಸಂಚುಕೋರ ಮುಸ್ಸಾವಿರ್ ಶಜೀಬ್ ಹುಸೇನ್ ಮತ್ತು ಅಬ್ದುಲ್ ಮಥೀನ್ನನ್ನು ತನಿಖೆಯಿಂದ ಪತ್ತೆ ಹಚ್ಚಲಾಗಿತ್ತು. ಎನ್ಐಎಗೆ ಬೇಕಾಗಿರುವ ಈ ಆರೋಪಿಗಳು ಸದ್ಯ ಪರಾರಿಯಾಗಿದ್ದಾರೆ.