ಹಾಸನ: ಇತ್ತೀಚೆಗೆ ಖದೀಮರು ಸಾರ್ವಜನಿಕ ಸ್ಥಳಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಎಷ್ಟು ಜಾಗೃತರಾದರೂ ಒಮ್ಮೊಮ್ಮೆ ಕಳ್ಳತನವಾಗುತ್ತಿರುತ್ತವೆ. ಸದ್ಯ ಇಂತಹದೇ ಒಂದು ಘಟನೆ ನಡೆದಿದೆ.
ಹಾಸನದ ಸಾರಿಗೆ ಬಸ್ ನಿಲ್ದಾಣದಲ್ಲಿ ಊರಿಗೆ ತೆರಳಲು ಬಸ್ ಹತ್ತುವಾಗ ಬಡ ಮಹಿಳೆಯ ಹದಿನೈದು ಸಾವಿರ ರೂ. ಹಣವನ್ನು ಖದೀಮರು ಎಗರಿಸಿದ್ದಾರೆ. ಇತ್ತ ಹಣ ಕಳೆದುಕೊಂಡ ಮಹಿಳೆ ಊರಿಗೆ ಹೋಗದೆ, ಬಸ್ ನಿಲ್ದಾಣದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಕಣ್ಣೀರು ಸುರಿಸುತ್ತ ಕುಳಿತುಕೊಂಡಿದ್ದರು. ಇದನ್ನು ಕಂಡು ಸ್ಥಳೀಯರು ಸಹಾಯ ಮಾಡಿದ್ದಾರೆ.
ವಿಜಯಪುರ ಮೂಲದ ಭಾರತಿ ಎಂಬ ಮಹಿಳೆಯೇ ಹಣ ಕಳೆದುಕೊಂಡು ಕಂಗಾಲಾದವರು. ಇವರು ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಕುಂದಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಬರಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಮಹಿಳೆಯು ಮಕ್ಕಳನ್ನು ಕರೆತಂದು ರಾಮನಾಥಪುರಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆಗಲೇ ಈ ಘಟನೆ ನಡೆದಿದೆ. ಕೂಲಿ ಮಾಡಿ ಸಂಗ್ರಹಿಸಿಟ್ಟಿದ್ದ ಹಣ ಕಳ್ಳತನವಾಗಿದ್ದಕ್ಕೆ ತಾಯಿ ಮಕ್ಕಳೊಂದಿಗೆ ಗೋಗರೆದಿದ್ದಾಳೆ. ಅಲ್ಲಿದ್ದ ಸ್ಥಳೀಯರು ನೆರವು ನೀಡಿದ್ದಾರೆ.