ಬಸ್ ಸೀಟಿಗಾಗಿ ಮಹಿಳೆಯರಿಬ್ಬರು ಹೊಡೆದಾಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ. ನಗರದ ಬಬಲೇಶ್ವರದ ಬಳಿ ಮಹಿಳೆಯರಿಬ್ಬರು ಕುಳಿತಕೊಳ್ಳಲು ಸೀಟು ಹಿಡಿವ ವಿಚಾರದಲ್ಲಿ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.
ಒಂದೆಡೆ ಈ ಮೇ 1ರ ಹೊತ್ತಿಗೆ ಶಕ್ತಿ ಯೋಜನೆಯ ಮೂಲಕ ರಾಜ್ಯದ 200.43 ಕೋಟಿ ಮಹಿಳೆಯರು, ಬಸ್ಸಿನಲ್ಲಿ ಉಚಿತ ಪ್ರಯಾಣ ಬೆಳೆಸಿ ಅದ್ಭುತ ಯಶಸ್ಸು ಸಿಕ್ಕಿದೆ ಎನ್ನುತ್ತಿರುವಾಗಲೇ ಈ ಮಹಿಳಾ ಮಣಿಗಳು ‘ಜಡೆವಾರ್’ ಮಾಡಿಕೊಂಡಿದ್ದು ಬೇಸರ ತರಿಸಿದೆ. ಉಚಿತ ಕೊಟ್ಟರೂ ಸುಖವಿಲ್ಲ ಎಂಬಂತಾಗಿದೆ.
ಸೀಟಿಗಾಗಿ ಸ್ಥಿಮಿತ ಕಳೆದಕೊಂಡು ಜಗಳ ನಡೆಸಿದ ಮಹಿಳೆಯರಿಬ್ಬರನ್ನು ಸಮಾಧಾನಿಸಿಕೊಂಡು, ಬಸ್ಸು ಹೊರಡುವಷ್ಟರಲ್ಲಿ ಪ್ರಯಾಣಿಕರ ಅರ್ಧ ಗಂಟೆ ಕಳೆದುಹೋಗಿತ್ತು. ತರಾ-ತುರಿ ಪ್ರಯಾಣ ಮಾಡಬೇಕಿದ್ದ ಕೆಲ ಪ್ರಯಾಣಿಕರು, ಕಾಲಹರಣ ಮಾಡಿದ ಆ ಇಬ್ಬರಿಗೂ ಜಗಳಗಂಟಿಯರಿಗೆ ಹಿಡಿಶಾಪ ಹಾಕಿದರು. ಒಟ್ಟಿನಲ್ಲಿ ಉಚಿತ ಪ್ರಯಾಣದ ಪರಿಣಾಮ ಹೆಂಗಸರ ಓಡಾಟ ಹೆಚ್ಚಾಗಿದ್ದು, ಈ ರೀತಿಯ ಕಿತ್ತಾಟ ಸರ್ವೇ-ಸಾಮಾನ್ಯ ಎಂಬಂತಾಗಿದೆ.