‘ವಿನಯ್ ರಾಜ್ ಕುಮಾರ್’ ನಟನೆಯ ಒಂದು ಸರಳ ಪ್ರೇಮ ಕಥೆಯ ಹಾಡುಗಳು ಬಿಡುಗಡೆಕಂಡು ಸಖತ್ ಸೌಂಡು ಮಾಡುತ್ತಿದೆ. ‘ಸಿಂಪಲ ಸುನಿ’ ನಿರ್ದೇಶನವಿರುವ ಈ ಚಿತ್ರದ “ನೀನ್ಯಾರಲೇ” ಮತ್ತು “ಗುನು ಗುನುಗು” ಹಾಡುಗಳು ಲಿರಿಕಲ್ ರೂಪದಲ್ಲಿ ಬಿಡುಗಡೆಕಂಡು ಸದ್ದು ಮಾಡುತ್ತಿವೆ. ಇದೀಗ “ಎಲ್ಲಾ ಮಾತನ್ನು ಒಂದೇ ಬಾರಿ ಆಡಲೇ ಈಗ.. ಬಲು ಮುದ್ದಾದ ಮಾರಾ-ಮಾರಿ ಆಗಲಿ ಬೇಗ” ಎಂಬ ‘ಜಯಂತ್ ಕಾಯ್ಕಿಣಿ’ಯವರ ಸುಂದರ ಸಾಲುಗಳಿಗೆ, ಟ್ರೆಂಡಿ ಸಿಂಗರ್ ‘ಶಿವಾನಿ ಸ್ವಾಮಿ’ಯ ಮನಮೋಹಕ ಧ್ವನಿ ಸಖತ್ ಸಾಥ್ ನೀಡಿ, ಹಾಡು ಹಾರ್ಟ್ ಟಚ್ ಮಾಡುತ್ತಿದೆ.
ಇನ್ನು ಸೂಫಿ ಸ್ಟೈಲಲ್ಲಿ ಹಾಡು ಕಟ್ಟಿಕೊಟ್ಟಿರುವ ಸಂಗೀತ ನಿರ್ದೇಶಕ ವೀರ್ ಸಮರ್ಥ್ ತನ್ನ ಗಂಡು ಧ್ವನಿಯಲ್ಲಿ ಹೊಸ ಟ್ರೆಂಡ್ ಸೆಟ್ ಮಾಡುವ ಲಕ್ಷಣ ಕಾಣುತ್ತಿದೆ. ಸಂಗೀತದ ಜೊತೆ ಹಾಡೋಕು ಸೈ ಎನ್ನುವ ಮೂಲಕ ತನ್ನ “ಹೊಸ ರೀತಿಯ ಧ್ವನಿ”ಯನ್ನ ಕನ್ನಡಕ್ಕೆ ಪರಿಚಯಿಸಿಕೊಂಡಿದ್ದಾರೆ. ಹಾಗೆಯೇ, ಸೂಫಿ ಸ್ಟೈಲಿನ ಹಾಡುಗಳು ಕನ್ನಡದಲ್ಲಿ ತೀರಾ ಕಡಿಮೆ ಬಂದಿದ್ದು, ನಿರ್ದೇಶಕ ಸುನಿ ಪ್ರಯೋಗಕ್ಕೆ ತೆರೆದುಕೊಂಡು ವೀರ ಸಮರ್ಥರಿಗೆ ಮುಕ್ತವಾಗಿ ಅವಕಾಶ ಕಲ್ಪಿಸಿದ್ದು, ಈ ಹಾಡು ಬೇರೆಯದ್ದೇ ಲೆವೆಲ್ಲಿನ ಸೌಂಡು ಮಾಡುತ್ತಾ ಜನಮನ ಗೆಲ್ಲುತ್ತಿದೆ. ಹಾಡಿನ ಜೊತೆ-ಜೊತೆಗೆ ಚಿತ್ರದ ಮೇಲೆಯೂ ನಿರೀಕ್ಷೆ ಇಡುವಂತೆ ಮಾಡುತ್ತಿದೆ.

ಚಿತ್ರತಂಡ ಹೇಳಿಕೊಂಡಂತೆ ಚಿತ್ರದಲ್ಲಿ ನಾಯಕ ಹಾಡುಗಾರನಾಗಿದ್ದು, ಹತ್ತು ಹಾಡುಗಳು ಚಿತ್ರದುದ್ದಕ್ಕೂ ತುಂಬಿಕೊಂಡಿದ್ದು, ‘ಒಂದು ಸರಳ ಪ್ರೇಮ ಕಥೆ’ ಸಂಗೀತ ಪ್ರಧಾನ ಚಿತ್ರವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಅದರಂತೆ ಬಿಡುಗಡೆ ಕಂಡಿರುವ ಹಾಡುಗಳೆಲ್ಲವೂ ಸದ್ದು ಮಾಡಿದ್ದು, ಬತ್ತಳಿಕೆಯಲ್ಲಿರುವ ಮಿಕ್ಕ ಹಾಡುಗಳೂ ಕೂಡ “ಸೌಂಡಿಂಗ್ ಮೆಟಿರಿಯಲ್ಲೇ” ಎಂಬುದು ಚಿತ್ರತಂಡದ ಭರವಸೆ.
ಹಾಗೆಯೇ ಈ ಚಿತ್ರದ ನಾಯಕಿ ನಟಿ ‘ಮಲ್ಲಿಕಾ ಸಿಂಗ್’ ರಾಧೆಯಾಗಿ ಕನ್ನಡಿಗರ ಮನ ಗೆದ್ದಾಕೆ. ಈ ಮುದ್ದು ನಟಿಯ ‘ರಾಧಾ ಕೃಷ್ಣ’ ಧಾರಾವಾಹಿಯಲ್ಲಿನ ಮನಮೋಹಕ ನಟನೆಗೆ ಅಭಿಮಾನಿಗಳ ಹೃದಯ ತುಂಬಿಕೊಂಡಿತ್ತು. ಆ ಮೂಲಕ ಕರ್ನಾಟಕದಲ್ಲಿ ಈಕೆಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದೂ ಕೂಡ ಚಿತ್ರದ ಪ್ರಚಾರದ ಪ್ಲಸ್ ಪಾಯಿಂಟ್ ಆಗಲಿದೆ. ಇನ್ನು ವಿನಯ್ ರಾಜ್ ಕುಮಾರ್ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಈ ಜೋಡಿ ಹಾಡುಗಳಲ್ಲಿ ಲವ್ಲಿಯಾಗಿ ಕಾಣಿಸಿಕೊಂಡಿದೆ.
ಒಟ್ಟಿನಲ್ಲಿ ಒಂದು ಸರಿಯಾದ ಯಶಸ್ಸಿನ ಹುಡುಕಾಟದಲ್ಲಿರುವ ವಿನಯ್ ರಾಜ್ ಕುಮಾರ್ ಮತ್ತು ನಿರ್ದೇಶಕ ಸುನಿ ಹಾಗೂ ಸಂಗೀತ ನಿರ್ದೇಶಕ ವೀರ್ ಸಮರ್ಥ್, ಈ ಮೂವರೂ ಸೇರಿ, ಒಂದು ಭರ್ಜರಿ ತಯಾರಿಯ ಜೊತೆ ಫೀಲ್ಡಿಗಿಳಿದಿದ್ದು , ಗೆಲುವಿನತ್ತಲೇ ಪಯಣಿಸಿದಂತಿದೆ. ಹಾಗೆಯೇ ಆಗಲಿ.