ಹೈದರಾಬಾದ್: ರನ್ ಗಳ ಸುರಿಮಳೆಯಲ್ಲಿ ಹೈದರಾಬಾದ್ ತಂಡ ಗೆದ್ದು ಬೀಗಿದೆ.
ಸಿಕ್ಸರ್, ಬೌಂಡರಿಗಳ ಆರ್ಭಟದ ಆಟದಲ್ಲಿ ಮುಂಬೈಗಿಂತ ತಾನು ಮೇಲು ಎಂಬುವುದನ್ನು ಹೈದರಾಬಾದ್ ಸಾಬೀತು ಮಾಡಿದೆ. ಹೈದರಾಬಾದ್ ತಂಡ ಈ ಪಂದ್ಯದಲ್ಲಿ 31 ರನ್ ಗಳ ಜಯ ಸಾಧಿಸಿದೆ. ಗೆಲ್ಲಲು 278 ರನ್ ಗಳ ಬೃಹತ್ ಗುರಿ ಪಡೆದಿದ್ದ ಮುಂಬೈ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 246 ರನ್ ಮಾತ್ರ ಗಳಿಸಲು ಯಶಸ್ವಿಯಾಯಿತು. ಈ ಮೂಲಕ ಮುಂಬೈ ತಂಡ ಸತತ ಎರಡನೇ ಸೋಲು ಕಂಡಂತಾಗಿದೆ. ಒಂದೇ ಪಂದ್ಯದಲ್ಲಿ ಎರಡು ತಂಡಗಳ ಮೊತ್ತ 500 ರನ್ ಗಡಿ ದಾಟಿದ್ದು ವಿಶೇಷ. ಒಟ್ಟು 523 ರನ್ ಸಿಡಿದಿದ್ದು ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲು.
ಈ ಪಂದ್ಯದಲ್ಲಿ ಒಟ್ಟು 31 ಬೌಂಡರಿ, 38 ಸಿಕ್ಸರ್ ಬಂದಿವೆ. ಐಪಿಎಲ್ ನಲ್ಲಿ ಇದು ಕೂಡ ದಾಖಲೆಯಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ 277 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತೀ ಹೆಚ್ಚು ರನ್ ಗಳಿಸಿತು. ಈ ಮೂಲಕ ಆರ್ ಸಿಬಿ ಹೆಸರಿನಲ್ಲಿದ್ದ (263) ದಾಖಲೆ ಮುರಿಯಿತು. ಕಠಿಣ ಗುರಿ ಬೆನ್ನಟ್ಟಿದ್ದ ಮುಂಬೈ ಪರ ಆರಂಭದಲ್ಲೇ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಅಬ್ಬರಿಸಲು ಆರಂಭಿಸಿದರು. ಈ ಜೋಡಿ 20 ಎಸೆತಗಳಲ್ಲಿ 56 ರನ್ ಗಳಿಸಿತು. ಈಶನ್ ಕಿಶನ್ 34 ರನ್(13 ಎಸೆತ, 2 ಬೌಂಡರಿ, 4 ಸಿಕ್ಸರ್) ಹೊಡೆದು ಔಟಾದರೆ ರೋಹಿತ್ ಶರ್ಮಾ 26 ರನ್ (12 ಎಸೆತ, 1 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು.
ನಮನ್ ಧೀರ್ 30 ರನ್(14 ಎಸೆತ, 2 ಬೌಂಡರಿ, 2 ಸಿಕ್ಸರ್) ಗಳಿಸಿ ಔಟ್ ಆದರು. ತಿಲಕ್ ವರ್ಮಾ 24 ಎಸೆತಗಳಲ್ಲಿ 64 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 24 ರನ್ ಹೊಡೆದರು ಔಟಾದರೆ ಡಿಮ್ ಡೇವಿಡ್ ಔಟಾಗದೇ 42 ರನ್ (22 ಎಸೆತ, 2 ಬೌಂಡರಿ, 3 ಸಿಕ್ಸರ್) ಗಳಿಸಿದರು. ನಾಯಕ ಪ್ಯಾಟ್ ಕಮ್ಮಿನ್ಸ್ ರೋಹಿತ್ ಶರ್ಮಾ ಮತ್ತು ತಿಕಲ್ ವರ್ಮಾ ವಿಕೆಟ್ ಗಳಿಸಿ ಹೈದರಾಬಾದ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.